ಬೆಂಗಳೂರು: ರಾಮನಗರ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರೊಬ್ಬರ ಹಸ್ತಕ್ಷೇಪದಿಂದ ಬಿಡದಿಯ ಈಗಲ್‌ಟನ್ ರೆಸಾರ್ಟ್ ಮಾಲೀಕರಿಗೆ ₹ 982 ಕೋಟಿ ದಂಡ ವಿಧಿಸಿ ಅನ್ಯಾಯ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರು 1986ರಿಂದ ಹಂತ ಹಂತವಾಗಿ ಸರ್ಕಾರದ ಅನುಮತಿ ಪಡೆದುಕೊಂಡು ರೆಸಾರ್ಟ್ ನಿರ್ಮಿಸಿದ್ದಾರೆ. ಸರ್ಕಾರಿ ಜಮೀನು ಅತಿಕ್ರಮಣ ಆರೋಪದಡಿ ₹ 1 ಕೋಟಿಗಿಂತ ಕಡಿಮೆ ದಂಡ ವಿಧಿಸಲಾಗಿತ್ತು. ಅದು ₹ 982 ಕೋಟಿಗೆ ಏರಿಕೆಯಾಗಲು ರಾಜಕೀಯ ಪ್ರಭಾವವೇ ಕಾರಣ’ ಎಂದರು.
ಚುನಾವಣೆಯೊಂದರ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ತಮ್ಮ ಬೆಂಬಲಿಗರಿಗೆ ಅಲ್ಲಿ ಊಟ ಹಾಕಿಸಿದ್ದರು. ₹ 95,000 ಬಿಲ್ ನೀಡಲಾಗಿತ್ತು. ಆ ಸಿಟ್ಟಿನಿಂದ ಈಗಲ್‌ಟನ್ ರೆಸಾರ್ಟ್ ಮಾಲೀಕರ ಮೇಲೆ ಹಗೆತನ ಸಾಧಿಸುತ್ತಿದ್ದರು. ಜಿಲ್ಲಾಧಿಕಾರಿಯೊಬ್ಬರ ಮೇಲೆ ಒತ್ತಡ ಹೇರಿ ಇಷ್ಟು ದೊಡ್ಡಮೊತ್ತದ ದಂಡ ಹಾಕಿಸಿದ್ದಾರೆ. ಇದರಿಂದ ರೆಸಾರ್ಟ್ ಮಾಲೀಕರ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ದೂರಿದರು.
‘ರೆಸಾರ್ಟ್ ಮಾಲೀಕರ ಮಗನನ್ನು ಕರೆಸಿ, ಸಮಸ್ಯೆ ಕುರಿತು ಮಾತನಾಡಿದೆ. ಎಲ್ಲ ದಾಖಲೆಗಳನ್ನೂ ನೀಡಿದ ಅವರು ನೈಜ ವಿಷಯ ತಿಳಿಸಿದರು. ಈಗ ಸರ್ಕಾರ ಅವರಿಗೆ ನ್ಯಾಯ ಕೊಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.