ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರುವ ಕೆಲಸವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲು ಮಾಡಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ, ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಏನು ಮಾಡಿದರು? ಅವರ ಕೊಡುಗೆ ಏನು? ಗಾಳಿಯಲ್ಲಿ ಗುಂಡು ಹೊಡೆಯುವುದೇ ಅವರ ಕೊಡುಗೆ’ ಎಂದರು.
‘ತಮ್ಮ ಅವಧಿಯಲ್ಲಿ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆಯೇ? ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಅವರು ಹೇಳಿದ್ದಾರಲ್ಲವೇ, ರಾಜ್ಯದಲ್ಲಿ ಅವರಿಗೆ ಎಷ್ಟು ಜಮೀನು ಬೇಕೆಂದು ಪತ್ರ ಬರೆಯಲಿ. ಯಾವ ಕೈಗಾರಿಕೆಯನ್ನು ತರುತ್ತಾರೆಂದು ಯೋಜನಾ ವರದಿ ಸಲ್ಲಿಸಲಿ. ನಾನೇ ಮುಂದೆ ನಿಂತು ಅಗತ್ಯ ಜಮೀನು ಕೊಡಿಸುತ್ತೇನೆ’ ಎಂದರು.
‘ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲವೆಂದು ಕೆಲವು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ ಎಂದು ಕೇಳಿದಾಗ, ‘ಕೆಲವರು ತಮ್ಮದೇ ಲೆಕ್ಕಾಚಾರದಲ್ಲಿ ಹೇಳಿರುತ್ತಾರೆ. ಅದಕ್ಕೆ ಪ್ರಕ್ರಿಯೆಗಳಿವೆ. ಕೆಲವರು ತಮ್ಮ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ಬೇಕು ಎಂದು ಕೇಳುತ್ತಾರೆ. ಅವರು ಕೇಳಿದ ತಕ್ಷಣ ಕೊಡಲು ಆಗುವುದಿಲ್ಲ. ಆಯಾ ಕ್ಷೇತ್ರಕ್ಕೆ ಎಷ್ಟು ಕೊಡಬೇಕು ಎಂಬ ಲೆಕ್ಕಾಚಾರವಿದೆ. ಅದರಂತೆ ನೀಡುತ್ತೇವೆ’ ಎಂದರು.
ಯತ್ನಾಳ ಹೇಳಿದ ₹1 ಸಾವಿರ ಕೋಟಿ ಎಲ್ಲಿದೆ?: ‘ಬಿಜೆಪಿಯಿಂದ ಕಾಂಗ್ರೆಸ್ ಶಾಸಕರ ಖರೀದಿ ಕುರಿತು ನಿಮಗೆ ಮಾಹಿತಿ ಇದೆಯೇ’ ಎಂಬ ಪ್ರಶ್ನೆಗೆ ಗರಂ ಆದ ಶಿವಕುಮಾರ್, ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ₹1 ಸಾವಿರ ಕೋಟಿ ವಿಚಾರವಾಗಿ ಪ್ರಸ್ತಾಪಿಸಿರುವ ಬಗ್ಗೆ ಮಾಧ್ಯಮಗಳು ಯಾಕೆ ಚರ್ಚೆ ಮಾಡುತ್ತಿಲ್ಲ. ಆ ಹಣ ಎಲ್ಲಿಂದ ಬಂತು, ಯಡಿಯೂರಪ್ಪ, ಅಶೋಕ, ವಿಜಯೇಂದ್ರ, ಅಶ್ವತ್ಥ ನಾರಾಯಣ್, ಕುಮಾರಸ್ವಾಮಿ ಯಾರ ಮನೆಯಲ್ಲಿ ಆ ಹಣವಿದೆ ಎಂದು ಚರ್ಚೆ ಮಾಡಿ. ಯತ್ನಾಳ ಈ ಆರೋಪ ಮಾಡಿದ ಮೇಲೆ ಬಿಜೆಪಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆಯೇ? ಅದು ಸುಳ್ಳು ಎಂದು ಹೇಳಿದ್ದಾರೆಯೇ? ಅಲ್ಲಿಂದ ಚರ್ಚೆ ಆರಂಭವಾಗಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.