ADVERTISEMENT

ಬಿಜೆಪಿ ಜತೆ ಸಮನ್ವಯ: ಜೆಡಿಎಸ್ ಕಾರ್ಯಕರ್ತರಿಗೆ ಎಚ್‌ಡಿಕೆ ಸೂಚನೆ

ಬಿಜೆಪಿ ಜತೆ ಸಮನ್ವಯ: ಜೆಡಿಎಸ್ ಕಾರ್ಯಕರ್ತರಿಗೆ ಎಚ್‌ಡಿಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 19:54 IST
Last Updated 8 ಜನವರಿ 2024, 19:54 IST
<div class="paragraphs"><p>ಎಚ್‌ಡಿಕೆ</p></div>

ಎಚ್‌ಡಿಕೆ

   

ಬೆಂಗಳೂರು: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಹಂತದಿಂದ ಬಿಜೆಪಿ ಕಾರ್ಯಕರ್ತರ ಜತೆ ಸಮನ್ವಯ ಸಾಧಿಸಿಕೊಂಡು ಚುನಾವಣಾ ಸಿದ್ಧತೆ ಆರಂಭಿಸುವಂತೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು.

ಲೋಕಸಭಾ ಚುನಾವಣಾ ಸಿದ್ಧತೆಗಾಗಿ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಪ್ರಮುಖ ಪದಾಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಮಿತ್ರಪಕ್ಷದ ಜತೆ ಸಂಪೂರ್ಣ ಸಮನ್ವಯದೊಂದಿಗೆ ಚುನಾವಣಾ ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಿದರು.

ADVERTISEMENT

‘ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಕ್ಷೇತ್ರಗಳ ಹಂಚಿಕೆ ಇನ್ನೂ ಆಗಿಲ್ಲ. ಆದರೆ, ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಬಿಜೆಪಿ ಜತೆ ಸಮನ್ವಯ ಸಾಧಿಸಬೇಕು. ದೇಶದ ಪ್ರಧಾನಿ ಮತ್ತು ಮಾಜಿ ಪ್ರಧಾನಿ ಮಧ್ಯೆ ಆಗಿರುವ ಮೈತ್ರಿಯನ್ನು ಎಲ್ಲ ಹಂತದಲ್ಲೂ ಅನುಷ್ಠಾನಕ್ಕೆ ತರಬೇಕು’ ಎಂದು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ಗುರಿ. ಅದಕ್ಕಾಗಿ ಸಂಪೂರ್ಣ ಶ್ರಮ ಹಾಕಬೇಕು. ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯಕ್, ಶಾಸಕರಾದ ವೆಂಕಟ ಶಿವಾರೆಡ್ಡಿ, ಎಂ.ಟಿ. ಕೃಷ್ಣಪ್ಪ, ಎ.ಮಂಜು, ನೇಮಿರಾಜ್ ನಾಯಕ್, ಸಮೃದ್ಧಿ ಮಂಜುನಾಥ್, ಕರೆಮ್ಮ ನಾಯಕ್, ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಹಾಗೂ 10ಕ್ಕೂ ಹೆಚ್ಚು ಮಾಜಿ ಶಾಸಕರು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.