ADVERTISEMENT

ಮಂಗಳೂರು ಬಾಂಬ್‌| ಕತೆ ಹೇಳದೆ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಲಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 2:33 IST
Last Updated 21 ಜನವರಿ 2020, 2:33 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಚಿಕ್ಕಮಗಳೂರು:‌ಮಂಗಳೂರಿನಲ್ಲಿ ಬಾಂಬ್‌ ಇಟ್ಟವರು ಯಾರೆಂಬುದನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಶೃಂಗೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಬಾಂಬ್‌ ಇಟ್ಟಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಪೊಲೀಸರು ಪತ್ತೆ ಕಾರ್ಯಕ್ಕೆ 15 ದಿನ ಅಥವಾ ತಿಂಗಳು ಸಮಯ ತೆಗೆದುಕೊಂಡು ಹೊಸ ಕತೆ ಸೃಷ್ಟಿಸಬಾರದು’ ಎಂದು ಹೇಳಿದರು.

‘ಸರ್ಕಾರವು ಕೆಲ ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡು ಜನತೆಯಲ್ಲಿ ಸಂಘರ್ಷದ ಮನೋಭಾವ ಉಂಟುಮಾಡುವ ವಾತಾವರಣ ಸೃಷ್ಟಿಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ’ ಎಂದರು.

ADVERTISEMENT

‘ಕೆಲವರನ್ನು ಮೆಚ್ಚಿಸಲು ಅಧಿಕಾರಿಗಳು ಸಂಶಯಾತ್ಮಕ ಹೇಳಿಕೆ ನೀಡುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು. ಜನರಿಗೆ ಸತ್ಯಾಂಶ ತಿಳಿಸಬೇಕು. ಸಂಘರ್ಷಕ್ಕೆ ಎಡೆಮಾಡಬಾರದು’ ಎಂದು ತಿಳಿಸಿದರು.

ಮಂಗಳೂರು ಗಲಭೆ ಉಲ್ಲೇಖಿಸಿ ಮಾತನಾಡಿದ ಅವರು,‘ಕೆಲವರು ಕಲ್ಲಲ್ಲಿ ಹೊಡೆದಿದ್ದನ್ನು ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ಗೆ ಹೇಳಿದ್ದೇವೆ ಎಂದು ಸಿಎಎ ಪರವಾಗಿ ಬೆಂಗಳೂರಿನ ಟೌನ್‌ ಹಾಲ್‌ ಮುಂದೆ ಈಚೆಗೆ ರ‍್ಯಾಲಿ ಮಾಡಿದ ಗುಂಪು ಹೇಳಿದೆ. ಏಳು ಕಲ್ಲು ಬಿದ್ದಿವೆ ಎಂದು ಕಮಿಷನರ್‌ ಹೇಳಿದ್ದಾರೆ. ಈವರೆಗೆ ಯಾಕೆ ಈ ವಿಷಯ ಹೇಳಿರಲಿಲ್ಲ. ಒಂದು ವರ್ಗವನ್ನು ಒಲೈಸಲು ಅಮಾಯಕರನ್ನು ಬಲಿ ಹಾಕುವ ವಾತಾವರಣ ಸೃಷ್ಟಿಸಬಾರದು. ಜನರಲ್ಲಿ ವೈಷಮ್ಯ ಉಂಟು ಮಾಡಿ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಆ ಕೆಲಸ ಮಾಡಬಾರದು’ ಎಂದು ಉತ್ತರಿಸಿದರು.

‘ರಾಜ್ಯದಲ್ಲಿ ಬಹಳಷ್ಟು ಜ್ವಲಂತ ಸಮಸ್ಯೆಗಳಿವೆ. ಮತ್ತಷ್ಟನ್ನು ಹುಟ್ಟುಹಾಕುವ ಅಗತ್ಯ ಏನಿದೆ. ಸರ್ಕಾರ ನಡೆಸುವವರು ಭಯದ ವಾತಾವರಣ ನಿರ್ಮಿಸಬಾರದು. ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದರು.

‘ಬಿಜೆಪಿಯವರು ಕಷ್ಟಪಟ್ಟು ಅಧಿಕಾರ ಹಿಡಿದಿದ್ದಾರೆ. 34 ಮಂದಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಿದರೂ ನಮ್ಮದೇನು ಅಭ್ಯಂತರ ಇಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಿ ಎಂಬುದಷ್ಟೇ ನಮ್ಮ ಕೋರಿಕೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.