ಹಾಸನ: ಕೆ.ಎಂ.ಶಿವಲಿಂಗೇಗೌಡರ ರೇವಣ್ಣನಂತೆ ನನ್ನ ಕಿವಿಗೆ ಹೂ ಮುಡಿಸೋಕೆ ಆಗುತ್ತಾ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಮನಸ್ಸಿನ ರೇವಣ್ಣ ಅವರು ಶಿವಲಿಂಗೇಗೌಡರು ನಮ್ಮ ಜೊತೆಗೆ ಇರಲಿ ಎಂದು ಇಷ್ಟು ದಿನ ಪ್ರಯತ್ನ ಮಾಡಿದರು. ಆದರೆ, ಶಿವಲಿಂಗೇಗೌಡರು ಮಾಡಿದ್ದೇನು ಎಂದು ಪ್ರಶ್ನಿಸಿದರು.
ನನ್ನನ್ನು ಕರೆದಿಲ್ಲ. ಸಭೆಗೆ ನಾನು ಹೋಗಲ್ಲ ಎಂಬ ಶಿವಲಿಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದುವರೆಗೆ ಇವರು ಏನೆಲ್ಲ ಕಾರ್ಯಕ್ರಮ ಮಾಡಿದ್ದಾರೆ. ಅದಕ್ಕೆ ನಮ್ಮನ್ನು ಕರೆದಿದ್ದರೆ? ಅಷ್ಟಕ್ಕೂ ಅರಸೀಕೆರೆಯಲ್ಲಿ ಅವರನ್ನು ಕರೆಯುವ ಅಗತ್ಯ ಏನಿದೆ ಎಂದು ಕೇಳಿದರು.
ಕಳೆದ ತಿಂಗಳು ನನಗೆ ಕರೆಮಾಡಿ, ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಳಿದ್ದರು. ಎಷ್ಟು ದಿನ ಅವಕಾಶ ಕೊಡಬೇಕು. ಹೀಗೆಯೇ ಸಮಯವನ್ನು ತಳ್ಳುತ್ತ ಹೋಗುವುದು ಇವರ ಉದ್ದೇಶ ಎಂದ ಕುಮಾರಸ್ವಾಮಿ, ಶಿವಲಿಂಗೇಗೌಡರು ವಿಧಾನಸೌಧದಲ್ಲಿ ಏನು ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲವೇ ಎಂದು ಕಿಡಿ ಕಾರಿದರು.
ವಧು-ವರರನ್ನು ಹರಸುತ್ತಿರುವ ಶಿವಲಿಂಗೇಗೌಡ
ಅರಸೀಕೆರೆ: ಪಟ್ಟಣದಲ್ಲಿ ಭಾನುವಾರ ಜೆಡಿಎಸ್ ಸಭೆ ನಡೆಯುತ್ತಿದ್ದು, ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅರಸೀಕೆರೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಪಟ್ಟಣದಲ್ಲಿಯೇ ಇರುವ ಅವರು, ಜೆಡಿಎಸ್ ಸಭೆಗೂ, ನನಗೂ ಸಂಬಂಧವಿಲ್ಲ ಎನ್ನುವಂತೆ ವಧು-ವರರನ್ನು ಹಾರೈಸುವುದರಲ್ಲಿ ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.