ADVERTISEMENT

‘ಸಂತೋಷದಿಂದಲೇ ಅಧಿಕಾರ ಬಿಡುತ್ತೇನೆ’- ಎಚ್‌.ಡಿ.ಕುಮಾರಸ್ವಾಮಿ

ದುಃಖ ಇಲ್ಲ, ಕಣ್ಣೀರು ಹಾಕುವುದೂ ಇಲ್ಲ ಎಂದು ಭಾವುಕರಾಗಿ ಮಾತನಾಡಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:21 IST
Last Updated 23 ಜುಲೈ 2019, 20:21 IST
ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಕಂಡು ಬಂದಿದ್ದು ಹೀಗೆ
ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಕಂಡು ಬಂದಿದ್ದು ಹೀಗೆ   

ಬೆಂಗಳೂರು: ‘ನಾನು ಸಂತೋಷದಿಂದ ಅಧಿಕಾರ ತ್ಯೆಜಿಸುತ್ತೇನೆ. ನನಗೆ ದುಃಖ ಇಲ್ಲ, ಕಣ್ಣೀರು ಹಾಕುವುದೂ ಇಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾವೋದ್ವೇಗದಿಂದ ನುಡಿದರು.

ವಿಧಾನಸಭೆಯಲ್ಲಿ ಮಂಗಳವಾರ ವಿಶ್ವಾಸಮತದ ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಸುಮಾರು ಎರಡು ತಾಸುಗಳಷ್ಟು ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

‘ಹಿಂದೆ ಅಧಿಕಾರ ತ್ಯಜಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದೆ. ನನ್ನನ್ನು ವಚನ ಭ್ರಷ್ಟ ಎಂಬ ಹಣೆ ಪಟ್ಟಿಕಟ್ಟಿದ್ದರು. ಇವತ್ತೂ ಕೂಡ ವಿಶ್ವಾಸಮತಕ್ಕೆ ಹಿಂದೇಟು ಹಾಕುತ್ತಿದ್ದೇನೆ ಎಂದು ಬಿಂಬಿಸಿ, ವಚನ ಭ್ರಷ್ಟ ಎಂದು ಪಟ್ಟು ಕಟ್ಟಲು ಹೊರಟಿದ್ದೀರಲ್ಲ, ಇದರಿಂದ ನಿಮಗೆ ಏನು ಸಿಗುತ್ತದೆ’ ಎಂದು ಬಿಜೆಪಿಯ ಮೇಲೆ ಹರಿಹಾಯ್ದರು.

ADVERTISEMENT

‘ನಾನೇನು ತಪ್ಪು ಮಾಡಿದ್ದೇನೆ ಎಂದು ಈ ಶಿಕ್ಷೆ. ಕಳೆದ ನಾಲ್ಕು ದಿನಗಳಿಂದ ನಡೆದ ಘಟನೆಗಳು ಏನಿವೆಯೋ, ಅದಕ್ಕೆ ನಾಡಿನ ಜನತೆ ನಮ್ಮನ್ನು ಕ್ಷಮಿಸಲಾರರು. ಇಷ್ಟು ದಿನ ಆದರೂ ಕುಮಾರಸ್ವಾಮಿ ರಾಜೀನಾಮೆ ಕೊಡದೇ ಅಧಿಕಾರಕ್ಕೆ ಅಂಟಿಕೊಂಡು ಕೂರಲೆಂದೇ ಕಾಲಹರಣ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆದಿದೆ. ಈ ಸಂಬಂಧ ಸಭಾಧ್ಯಕ್ಷರೇ ನಿಮಗಾದ ನೋವು ಮತ್ತು ದುಗುಡವನ್ನು ಬಲ್ಲೆ. ಅದಕ್ಕಾಗಿ ನಿಮಗೆ ಮತ್ತು ರಾಜ್ಯದ ಆರೂವರೆ ಕೋಟಿ ಜನರ ಬಳಿ ಕ್ಷಮೆ ಯಾಚಿಸುತ್ತೇನೆ’ ಎಂದರು.

‘ನಾನು ನಾಲ್ಕು ದಿನ ತೆಗೆದುಕೊಂಡಿರಬಹುದು. ಇದರಲ್ಲಿ ಸ್ವಾರ್ಥ ಇದೆ. ಹೊರ ಹೋಗಿರುವ ಶಾಸಕರು ಮತ್ತೆ ಬರುತ್ತಾರೆ ಎಂಬ ವಿಶ್ವಾಸ ಎಲ್ಲೊ ಒಂದು ಕಡೆ ಇತ್ತು. ತಪ್ಪು ಮಾಡುವುದು ಸಹಜ. ಅವರ ಮನ ಪರಿವರ್ತನೆ ಆಗಬಹುದು. ಜ್ಞಾನೋದಯವೂ ಆಗಬಹುದು ಎಂಬ ಕಾರಣಕ್ಕೆ ಕಾಲಹರಣ ಮಾಡಿರಬಹುದು’ ಎಂಬುದಾಗಿ ಮನದಾಳದ ಮಾತುಗಳನ್ನು ಮುಂದಿಟ್ಟರು.

‘ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳಲ್ಲಿ ಲೋಡ್‌ ಶೆಡ್ಡಿಂಗ್‌ಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ‘ಕತ್ತಲೆಗೆ ನೂಕಿದ ಕುಮಾರ’ ಎಂಬ ವ್ಯಾಖ್ಯಾನ ಮಾಡಲಾಯಿತು. ಈ ಸರ್ಟಿಫಿಕೇಟ್‌ ತೆಗೆದುಕೊಳ್ಳಲು ಮುಖ್ಯಮಂತ್ರಿ ಆಗಬೇಕಿತ್ತಾ ಎನಿಸಿದ್ದೂ ಇದೆ. ಆಗ ತುಂಬಾ ನೋವಾಗಿತ್ತು’ ಎಂದು ಗದ್ಗದಿತರಾದರು.

ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರನ್ನು ಉದ್ದೇಶಿಸಿ,‘ ಇವರಿಗೋ ಶರವೇಗದಲ್ಲಿ ಸರ್ಕಾರ ಪತನವಾಗಬೇಕು ಎಂಬ ಧಾವಂತ. ಆದರೆ, ನನಗೆ ಯಾವುದೇ ಆತಂಕವಿರಲಿಲ್ಲ. ಆತಂಕ ಇದ್ದದ್ದು ನಿಮಗೆ. ಎಲ್ಲ ವಿದ್ಯಮಾನಗಳನ್ನೂ ಸಮಚಿತ್ತದಿಂದ ಎದುರಿಸುತ್ತಲೇ ಬಂದಿದ್ದೇನೆ. ನಾನು ಜೀವನದಲ್ಲಿ ಹಲವು ತಪ್ಪು ಮಾಡಿಕೊಂಡಿದ್ದೇನೆ. ತಿದ್ದಿಕೊಳ್ಳಲು ಯತ್ನಿಸಿದ್ದೇನೆ’ ಖಾರವಾಗಿ ನುಡಿದರು.

‘ನಮ್ಮ ತಂದೆಯವರ ಬಗ್ಗೆ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪಿತಾಮಹಾ ಎಂದು ಹೇಳಿದ್ದೀರಿ. ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರ ದುಡಿಮೆ, ಶ್ರಮ ಮತ್ತು ಯಾರ ಹಂಗು ಇಲ್ಲದೇ ರಾಜಕೀಯದಲ್ಲಿ ಬೆಳೆದು ಬಂದವರು. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ, ಜನರ ಮಧ್ಯೆ ಬೆಳೆದು ಬಂದವರು’ ಎಂದು ಯಡಿಯೂರಪ್ಪ ಅವರಿಗೆ ತಿರಗೇಟು ನೀಡಿದರು.

‘ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಆದರೆ, ನಾನು ರಾಜಕೀಯಕ್ಕೆ ಬರುವುದು ತಂದೆಯವರಿಗೆ ಇಷ್ಟವಿರಲಿಲ್ಲ. ರೇವಣ್ಣನಿಗೆ ಅವರ ಆಶೀರ್ವಾದ ಇತ್ತು. ತುರ್ತುಪರಿಸ್ಥಿತಿಯಲ್ಲಿ ತಂದೆಯವರು ಜೈಲಿಗೆ ಹೋಗಿದ್ದಾಗ, ಹೊಳೆನರಸೀಪುರ ಕ್ಷೇತ್ರವನ್ನು ನೋಡಿಕೊಂಡಿದ್ದೇ ರೇವಣ್ಣ. ಈ ಕಾರಣಕ್ಕೆ ವಿಶೇಷ ಪ್ರೀತಿ’ ಎಂದು ಕುಮಾರಸ್ವಾಮಿ ವಿವರಿಸಿದರು.

‘ನನಗೆ ನನ್ನದೇ ಆದ ಸಮಸ್ಯೆಗಳ ಮಧ್ಯೆಯೂ ಕೆಲಸ ಮಾಡಿದ್ದೇನೆ. ನಿರ್ಲಜ್ಜೆಯಿಂದ ನಡೆದುಕೊಳ್ಳುವ ಯಾವುದೇ ಕೆಲಸ ಮಾಡಿಲ್ಲ. ಇಲ್ಲಿ ಭಾಷಣ ಮಾಡಿ ಓಡಿ ಪಲಾಯನವಾದಿಯೂ ಆಗುವುದಿಲ್ಲ. ಸದನದಲ್ಲಿ ಸಂಖ್ಯೆ ಲೆಕ್ಕಾಚಾರ ಮಾಡಿ. ಮತಕ್ಕೆ ಹಾಕಿ, ಹೆದರುವವನು ನಾನಲ್ಲ’ ಎಂದು ಕುಮಾರಸ್ವಾಮಿ ಗುಡುಗಿದರು.

‘ನಮಗೆ ಎರಡು ಬಾರಿ ಟೋಪಿ ಹಾಕಿದ ಗೋಪಾಲಯ್ಯ ಕೊಲೆ ಪ್ರಕರಣದಲ್ಲಿ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದರು. ರಕ್ಷಣೆ ನೀಡಲಿಲ್ಲ ಎಂಬ ಸಿಟ್ಟು ಅವರಿಗೆ. ಈಗ ನೀವು(ಬಿಜೆಪಿ) ಅವರಿಗೆ ರಕ್ಷಣೆ ಕೊಡುತ್ತೀರಾ? ಅಧಿಕಾರದಲ್ಲಿ ಇದ್ದಾಗ ಇಂತಹ ಪ್ರಕರಣದಲ್ಲಿ ದುರುಪಯೋಗಕ್ಕೆ ಎಂದೂ ಅವಕಾಶ ಕೊಟ್ಟಿಲ್ಲ’ ಎಂದರು.

‘ವ್ಯಾಪಾರಕ್ಕಾಗಿ ವೆಸ್ಟ್‌ಎಂಡ್‌ನಲ್ಲಿ ವಾಸ್ತವ್ಯ ಹೂಡಿದ್ದಲ್ಲ’

‘ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ಉಳಿಯಲು ಮುಖ್ಯ ಕಾರಣ ಯಾವುದೇ ದಂಧೆ ಅಥವಾ ವ್ಯಾಪಾರ ಮಾಡಲು ಅಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಬರುವಾಗ ಅದೇ ಹೊಟೇಲ್‌ನಲ್ಲಿದ್ದೆ. ಆಗ ಗುಲಾಂನಬಿ ಆಜಾದ್‌ ದೂರವಾಣಿ ಕರೆ ಮಾಡಿ ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಲು ತೀರ್ಮಾನಿಸಿರುವುದಾಗಿ ಹೇಳಿದರು. ಆಗ ಇದ್ದ ಕೊಠಡಿಯನ್ನು ಅದೃಷ್ಟವೆಂದು ಪರಿಗಣಿಸಿ ಅಲ್ಲಿಯೇ ಉಳಿಯಲು ನಿರ್ಧರಿಸಿದೆ’ ಎಂದು ಕುಮಾರಸ್ವಾಮಿ ವೆಸ್ಟ್‌ ಎಂಡ್‌ ಹೊಟೇಲ್‌ ವಾಸ್ತವ್ಯದ ರಹಸ್ಯ ಬಿಡಿಸಿಟ್ಟರು.

‘ಮುಖ್ಯಮಂತ್ರಿಯಾಗಿ ಸರ್ಕಾರದ ಕಾರೂ ಬಳಸಲಿಲ್ಲ, ಪೆಟ್ರೋಲ್‌ ಕೂಡ ಹಾಕಿಸಲಿಲ್ಲ’ ಎಂದು ಅವರು ಹೇಳಿದರು.

ಕುಮಾರಸ್ವಾಮಿ ರಾಜೀನಾಮೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ರಾತ್ರಿ ರಾಜ್ಯಪಾಲರನ್ನು ಭೇಟಿಮಾಡಿ ತಮ್ಮ ಹಾಗೂ ಸಚಿವ ಸಂಪುಟ ಸದಸ್ಯರ ರಾಜೀನಾಮೆ ಸಲ್ಲಿಸಿದರು.

ತಕ್ಷಣವೇ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು, ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸಲಹೆ ಮಾಡಿದ್ದಾರೆ. ಆದರೆ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳದಂತೆ ಸೂಚಿಸಿದ್ದಾರೆ.

ವಿಧಾನ ಸಭೆಯಲ್ಲಿ ವಿಶ್ವಾಸ ನಿರ್ಣಯಕ್ಕೆ ಸೋಲುಂಟಾದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.