ಬೆಂಗಳೂರು: ವೈದ್ಯಕೀಯ ಸೌಲಭ್ಯ ಕೊರತೆ, ಸೂಕ್ತ ವೇತನ ಸಿಗದಿರುವುದೂ ಸೇರಿ ವಿವಿಧ ಕಾರಣಗಳಿಂದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ 1,500ಕ್ಕೂ ಅಧಿಕ ಕಾಯಂ ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ.
ರಾಜ್ಯದ ಆರೂವರೆ ಕೋಟಿ ಜನರಿಗೆ ಆರೋಗ್ಯ ಭದ್ರತೆ ಒದಗಿಸುವ ಭರವಸೆಯೊಂದಿಗೆ ಪ್ರಾರಂಭಿಸಲಾಗಿದ್ದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆಗೆ 3 ಸಾವಿರಕ್ಕೂ ಅಧಿಕ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 2 ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳೇ ಆಗಿವೆ. ವೈದ್ಯರ ಕೊರತೆಯಿಂದ ಈ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ವ್ಯತ್ಯಯವಾಗುತ್ತಿದೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 477 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, 237 ಶಸ್ತ್ರಚಿಕಿತ್ಸಕರು, 375 ಮಕ್ಕಳ ತಜ್ಞರು, 289 ದಂತ ತಜ್ಞರು ಹಾಗೂ 1,127 ತಜ್ಞ ವೈದ್ಯರು ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚಿನ ವೈದ್ಯರು ನಗರ ಕೇಂದ್ರಿತ ಆಸ್ಪತ್ರೆಗಳಲ್ಲೇ ಇದ್ದಾರೆ. ಗ್ರಾಮೀಣ ಭಾಗಕ್ಕೆ ಹೋಗಲು ನಿರಾಸಕ್ತಿ ತೋರುತ್ತಿರುವುದರಿಂದ ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ.
ನವೀಕರಣವಾಗದ ಗುತ್ತಿಗೆ: 2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷಕ್ಕೆ ಅನ್ವಯಿಸುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಕೋವಿಡ್ ನಿಯಂತ್ರಣದ ಬಳಿಕ ಗುತ್ತಿಗೆ ನವೀಕರಿಸಿಲ್ಲ. ಇದರಿಂದಾಗಿ ವೈದ್ಯರ ಕೊರತೆ ಮುಂದುವರಿದಿದೆ. ದಂತವೈದ್ಯರು, ಮಕ್ಕಳ ತಜ್ಞರ ಹುದ್ದೆಗಳು ಬಹುತೇಕ ಜಿಲ್ಲೆಗಳಲ್ಲಿ ಖಾಲಿ ಉಳಿದಿವೆ.
‘ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಖಾಸಗಿ ವ್ಯವಸ್ಥೆಯಡಿ ಉತ್ತಮ ವೇತನ ದೊರೆಯುವ ಕಾರಣ ಸ್ನಾತಕೋತ್ತರ ಪದವಿ ಪಡೆದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿಯೇ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಜ್ಯದಲ್ಲಿ 415 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಮೊದಲ ಹಂತದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ನೂರಕ್ಕೂ ಅಧಿಕ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿವೆ. ಜ್ವರದಂತಹ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ರಕ್ತ ಸೇರಿ ವಿವಿಧ ಪರೀಕ್ಷೆಗಳನ್ನೂ ನಡೆಸುವ ವ್ಯವಸ್ಥೆ ಇಲ್ಲಿದೆ. ಈ ಕ್ಲಿನಿಕ್‌ಗಳಿಗೆ ತಲಾ ಒಬ್ಬರು ವೈದ್ಯರನ್ನು ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಎಂಬಿಬಿಎಸ್ ಮುಗಿಸಿದ ವೈದ್ಯಾಧಿಕಾರಿಗೆ ₹47250 ವೇತನ ನಿಗದಿಪಡಿಸಲಾಗಿದೆ. ವೇತನ ಕಡಿಮೆ ಎಂಬ ಕಾರಣಕ್ಕೆ ಈ ಕ್ಲಿನಿಕ್‌ಗಳಲ್ಲಿಯೂ 50ಕ್ಕೂ ಅಧಿಕ ವೈದ್ಯರ ಹುದ್ದೆ ಖಾಲಿಯಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಸೂಚಿಸಲಾಗಿದೆ. ಕಡ್ಡಾಯ ಗ್ರಾಮೀಣ ಸೇವೆಯಡಿ ಲಭ್ಯವಿರುವ ಹುದ್ದೆಗಳಿಗೆ ಸ್ನಾತಕೋತ್ತರ ಪದವೀಧರರನ್ನು ಬಳಸಿಕೊಳ್ಳಲಾಗುತ್ತದೆ–ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವವರಿಗೂ ಸೂಕ್ತ ವೇತನ ಹಾಗೂ ಸೌಲಭ್ಯವನ್ನು ನೀಡಬೇಕು.–ಡಾ.ಎಸ್. ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.