ADVERTISEMENT

ಆರೋಗ್ಯ ಇಲಾಖೆ: ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 20:04 IST
Last Updated 15 ಜೂನ್ 2024, 20:04 IST
   

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ (2024-25) ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. 2016ರ ಬಳಿಕ ಎಲ್ಲ ವೃಂದಗಳಲ್ಲಿ (ಗ್ರೂಪ್‌ ‘ಎ’, ‘ಬಿ’, ‘ಸಿ’, ‘ಡಿ’) ಪೂರ್ಣ ಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಿ, ಅರ್ಹ ವೈದ್ಯರು, ಸಿಬ್ಬಂದಿಗೆ ನ್ಯಾಯ ಒದಗಿಸಲು ಇಲಾಖೆ ನಿರ್ಧರಿಸಿದೆ.

‌ವರ್ಗಾವಣೆ ಸಂಬಂಧ ಮಾರ್ಗಸೂಚಿ ಸಹಿತ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜುಲೈ 31ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಇಲಾಖೆಯಲ್ಲಿ ಗುರುತಿಸಿರುವ ತಜ್ಞ ಹುದ್ದೆಗಳಲ್ಲಿ ವೈದ್ಯರು ಪರಿಣಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸದೆ ಬೇರೆ ಪರಿಣಿತಿ ಅಥವಾ ಇತರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ತಜ್ಞ ವೈದ್ಯರ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ADVERTISEMENT

ಮೂರು ವರ್ಷ ಸೇವಾವಧಿ ಪೂರೈಸಿರುವ ವೈದ್ಯರು, ನಾಲ್ಕು ವರ್ಷ ಪೂರೈಸಿರುವ ಗ್ರೂಪ್ ‘ಬಿ’ ನೌಕರರು, ಐದು ವರ್ಷ ಪೂರೈಸಿದ ಗ್ರೂಪ್ ‘ಸಿ’ ನೌಕರರು ಮತ್ತು ಏಳು ವರ್ಷ ಸೇವಾವಧಿ ಪೂರೈಸಿರುವ ಗ್ರೂಪ್ ‘ಡಿ’ ನೌಕರರು ಜೂನ್ ತಿಂಗಳ ಅಂತ್ಯದೊಳಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈ  ಸೇವಾವಧಿ ಪೂರೈಸಿರುವ ವೈದ್ಯರು, ಸಿಬ್ಬಂದಿ ಹುದ್ದೆಗಳಿಗೆ ಮಾತ್ರ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.