ADVERTISEMENT

ಆಂಬುಲೆನ್ಸ್ ಸಿಬ್ಬಂದಿಗೆ ವೇತನ ‍ಪಾವತಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:43 IST
Last Updated 14 ನವೆಂಬರ್ 2024, 15:43 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ‘108-ಆರೋಗ್ಯ ಕವಚ ಯೋಜನೆಯಡಿಯ ಆಂಬುಲೆನ್ಸ್ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ. ನಿರ್ವಹಣಾ ಏಜೆನ್ಸಿ ಮತ್ತು ಚಾಲಕರ ನಡುವಿನ ಸಮಸ್ಯೆಯನ್ನು ಸರಿಪಡಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

‘ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ವೇತನವನ್ನು ಜಿವಿಕೆ–ಇಎಂಆರ್‌ಐ ಸಂಸ್ಥೆ  ಪಾವತಿಸಿಲ್ಲ’ ಎಂದು ಆರೋಪಿಸಿದ್ದ ಆಂಬುಲೆನ್ಸ್ ಸಿಬ್ಬಂದಿ, ನ.16ರ ಸಂಜೆಯೊಳಗೆ ವೇತನ ಪಾವತಿಯಾಗದಿದ್ದಲ್ಲಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ‘ಸಿಬ್ಬಂದಿಗೆ ಸೆಪ್ಟೆಂಬರ್‌ವರಗಿನ ವೇತನವನ್ನು ಏಜೆನ್ಸಿಯವರು ಪಾವತಿಸಿದ್ದಾರೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇಎಂಆರ್‌ಐ ಏಜೆನ್ಸಿಯವರಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಅಕ್ಟೋಬರ್ ವೇತನ ಪಾವತಿ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಪಾವತಿಸುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.

ADVERTISEMENT

‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳಾಗಿದ್ದವು. 108 ಆರೋಗ್ಯ ಕವಚ ಯೋಜನೆಯ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ, ಸರ್ಕಾರದ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ಶೇ 45 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಹೀಗೆ ಹೆಚ್ಚಳ ಮಾಡಲಾದ ಶೇ 45 ರಷ್ಟು ವೇತನವನ್ನು ಕಡಿತಗೊಳಿಸದಂತೆ ಈಗ ಸಿಬ್ಬಂದಿ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನ ನೀಡುತ್ತಾ ಬಂದಿದೆ’ ಎಂದು ತಿಳಿಸಿದ್ದಾರೆ.

‘ಆಂಬುಲೆನ್ಸ್ ಚಾಲಕರಿಗೆ ₹ 35 ಸಾವಿರಕ್ಕೂ ಹೆಚ್ಚು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ 45 ರಷ್ಟು ಹೆಚ್ಚಳ ಮಾಡುವಂತೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮ ಬಾಹಿರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.