ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ದೃಢ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯ ನೇತೃತ್ವದಲ್ಲಿ ಇಂದು ಸಂಜೆ ನಡೆಯುವ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಸಾವಿರಾರು ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಂಥ ಕಾರ್ಯಕ್ರಮಗಳ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಿ, ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಜನರ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳನ್ನು ಎಲ್ಲರೂ ಪಾಲಿಸಲೇಬೇಕಾಗುತ್ತದೆ ಎಂದೂ ಹೇಳಿದರು. ಆ ಮೂಲಕ, ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆಯ ಸುಳಿವು ನೀಡಿದರು.
ಈಗಾಗಲೇ ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಈ ವಿಷಯವೂ ನಮ್ಮ ಗಮನದಲ್ಲಿದೆ. ಮುಖ್ಯಮಂತ್ರಿ ಜೊತೆ ಕೆಲವು ಅಂಶಗಳ ಬಗ್ಗೆ ನಾನು ಈಗಾಗಲೇ ಚರ್ಚಿಸಿದ್ದೇನೆ. ಅಂತಿಮವಾಗಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚುತ್ತಿದೆ. ಕೋವಿಡ್ ದೃಢ ಪ್ರಮಾಣ 0.04 ಇದ್ದಿದ್ದು, ಸೋಮವಾರ ಶೇ 1.6ರಷ್ಟು ಆಗಿದೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 1,290 ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಶೇ 90 ಪ್ರಕರಣಗಳು ಬೆಂಗಳೂರಿನಲ್ಲಿ ಮಾತ್ರ ಪತ್ತೆಯಾಗಿದೆ ಎಂದ ಅವರು, ಸೋಂಕಿನ ಪ್ರಮಾಣದ ತೀವ್ರಗತಿಯಲ್ಲಿ ಏರುತ್ತಿರುವುದು ಮೂರನೇ ಅಲೆಯೇ ಎಂದರು.
ದೇಶದ ಎಲ್ಲ ಮೆಟ್ರೋ ಪಾಲಿಟನ್ ನಗರದಲ್ಲಿ ಶೇ 90 ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನಾದ್ಯಂತ ಇನ್ನಷ್ಟು ನಿಗಾ ವಹಿಸಬೇಕಿದೆ. ಮೈಕ್ರೋ ಕಂಟೋನ್ಮೆಂಟ್ ವಲಯಗಳನ್ನು ಮಾಡುವುದು ಸೇರಿದಂತೆ ಏನೆಲ್ಲ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ ಎಂದರು.
ರಾಜ್ಯದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಿದ್ದು, ಸೋಮವಾರ ಒಂದೇ ದಿನ 4,22,152 ಮಕ್ಕಳಿಗೆ ಲಸಿಕೆ ನೀಡಿದ್ದೇವೆ. ಮೊದಲ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೆವು. ಆದರೆ, ಶೇ 66 ಸಾಧನೆ ಆಗಿದೆ. ಆ ಮೂಲಕ, ಮೊದಲ ದಿನ ದೇಶದಲ್ಲಿ 4ನೇ ಸ್ಥಾನದಲ್ಲಿ ಇದ್ದೇವೆ. ಇವತ್ತು ಇನ್ನೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲು ತೀರ್ಮಾನಿಸಿದ್ದೇವೆ. ರಾಜ್ಯದಲ್ಲಿ ಈ ವಯೋಮಾನದ 43 ಲಕ್ಷ ಮಕ್ಕಳು ಇದ್ದಾರೆ. 10 ರಿಂದ 15 ದಿನಗಳ ಒಳಗೆ ಈ ಎಲ್ಲ ಮಕ್ಕಳಿಗೆ ಲಸಿಕೆ ಕೊಡುವ ಗುರಿ ಹೊಂದಲಾಗಿದೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಈಗ ಮಕ್ಕಳಿಗೆ ಸದ್ಯ ಮೊದಲ ಡೋಸ್ ಕೊಡಲಾಗುತ್ತಿದೆ. ಎರಡನೇ ಡೋಸ್‌ಗೆ ಕೊಡುವ ಬಗ್ಗೆ ಕೇಂದ್ರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದ ಬಳಿಕ ಅದನ್ನು ನೋಡಿಕೊಂಡು ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.
ಮಹಾರಾಷ್ಟದಲ್ಲಿ ಒಮೈಕ್ರಾನ್ ಪ್ರಕರಣ ಬಹಳ ವೇಗವಾಗಿ ಹರಡುತ್ತಿದೆ. ದೆಹಲಿ ಒಂದರಲ್ಲಿಯೇ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡಾ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಸೋಂಕು ತಡೆಯಲು ಆಗಲ್ಲ. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚುವುದನ್ನು ಕಡಿಮೆ ಮಾಡಲು ಸಾಧ್ಯ ಇದೆ ಎಂದೂ ವಿವರಿಸಿದರು.
ಲಾಕ್‌ಡೌನ್ ಬಗ್ಗೆ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ, ‘ದಯವಿಟ್ಟು ಅಂಥ ಕಠಿಣ ಪದ ಬಳಸಬೇಡಿ’ ಎಂದು ಮನವಿ ಮಾಡಿದ ಅವರು, ‘ಈಗಷ್ಟೆ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಮತ್ತೆ ಹೇರಿದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಆದರೆ, ಎಲ್ಲ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು, ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ನಿಭಾಯಿಸಿದ ಅನುಭವ ಇದೆ. ಅದರ ಆಧಾರದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳುವುದು ಅತೀ ಅವಶ್ಯ. ಬೆಂಗಳೂರು ಕೇಂದ್ರ ಭಾಗ. ಈ ಹಿಂದಿನ ಸಂದರ್ಭದಂತೆ ಮೂರನೇ ಅಲೆಗೂ ಇದೇ ಕೇಂದ್ರ. ಹೊರ ರಾಜ್ಯ, ಹೊರ ದೇಶಗಳಿಂದ ಬೆಂಗಳೂರಿಗೆ ಜನರು ಬರುತ್ತಾರೆ. ಹೀಗಾಗಿ, ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಪಾದಯಾತ್ರೆ ಮಾಡದಂತೆ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಪಾದಯಾತ್ರೆಗೆ ಎಲ್ಲ ಜಿಲ್ಲೆಗಳಿಂದ ಜನರನ್ನು ಕಾಂಗ್ರೆಸ್ ನಾಯಕರು ಕರೆಯುತ್ತಿದ್ದಾರೆ. ಸಾವಿರಾರ ಜನ ಬಂದರೆ, ಅದರಿಂದ ಪ್ರಕರಣ ಹೆಚ್ಚಿದರೆ ಅದರ ಜವಾಬ್ದಾರಿಯನ್ನು ಅವರೇ ಹೊರಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.