ಬೆಂಗಳೂರು: ‘ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು,ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದ್ದಾರೆ.
ಇಲಾಖೆ ಅಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಸಿದ ಅವರು, ‘ಧಾರಾಕಾರ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು ಸಮುದಾಯದ ಮಟ್ಟದಲ್ಲಿ ವ್ಯಾಪಿಸಿಕೊಳ್ಳುವ ಆತಂಕವಿದೆ.ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಸೇರಿ ವಿವಿಧ ರೋಗಗಳು ಈ ವೇಳೆ ತೀವ್ರತೆ ಪಡೆದುಕೊಳ್ಳಬಹುದು.ಆದ್ದರಿಂದ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಪ್ರವಾಹ ಪೀಡಿತ ಅಥವಾ ಭಾರಿ ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ತುರ್ತು ಸ್ಪಂದನಾ ತಂಡ (ರ‍್ಯಾಪಿಡ್ ರೆಸ್ಪಾನ್ಸ್ ಟೀಮ್) ಯಾವಾಗಲೂ ಸಿದ್ಧವಾಗಿರಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕುರಿತು ಕೂಡಲೇ ಅಧ್ಯಯನ ನಡೆಸಬೇಕು. ರೋಗಿಗಳ ಆರೈಕೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹೊಸ ರೋಗಿಗಳ ದಾಖಲಾತಿ, ಚಿಕಿತ್ಸೆ ಹಾಗೂ ತಪಾಸಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.