ಮಂಗಳೂರು/ಮೈಸೂರು: ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆ–ಗಾಳಿ ಆರ್ಭಟ, ಮಣ್ಣು ಕುಸಿತ ಮುಂದುವರಿಯಿತು. ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಶೃಂಗೇರಿಯಲ್ಲಿ ತುಂಗಾ ನದಿ ಭೋರ್ಗ
ರೆದು ಹರಿಯುತ್ತಿದೆ. ಶೃಂಗೇರಿ–ಮಂಗಳೂರು ಸಂಪರ್ಕ ಕಡಿತಗೊಂಡಿದ್ದು, ಗುಲುಗುಂಜಿ ಮನೆ ಮತ್ತು ಕೊರಕನಹಳ್ಳ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ಬಾಳೆಹೊನ್ನೂರು ಸಮೀಪದ ಮಾಗುಂಡಿ–ಮಹಲ್ ಗೋಡು–ಕಳಸ ಸಂಪರ್ಕ ರಸ್ತೆ ಕಡಿತಗೊಂಡಿದೆ. ಈ ರಸ್ತೆಯಲ್ಲಿ ಸೇತುವೆ ಮೇಲೆಯೇ ನೀರು ಹರಿಯುತ್ತಿದ್ದು, ಎರಡೂ ಬದಿಯಲ್ಲಿದ್ದ ತಡೆ ಕಂಬಗಳು ಕೊಚ್ಚಿ ಹೋಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ, ಬಂಟ್ವಾಳ ತಾಲ್ಲೂಕಿನ ಬುರಾಲು ಎಂಬಲ್ಲಿ ಧರೆ ಕುಸಿದಿದೆ. ಪುತ್ತೂರು ತಾಲ್ಲೂಕಿನ ಮಚ್ಚಿಮಲೆ– ಬಂಗಾರಡ್ಕ ರಸ್ತೆಯಲ್ಲಿ ಮಚ್ಚಿಮಲೆ ಎಂಬಲ್ಲಿ ರಸ್ತೆ ಬದಿಯ ಧರೆ 50 ಅಡಿ ಆಳಕ್ಕೆ ಕುಸಿದಿದೆ. ಈ ಮೂರು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿಯ ಪ್ರವಾಹ
ದಿಂದಾಗಿ ಸ್ನಾನಘಟ್ಟ, ದರ್ಪಣ ತೀರ್ಥ ಸೇತುವೆ ಮುಳುಗಿವೆ.
ಉಡುಪಿ ಹೊರವಲಯದ ಕೆಮ್ತೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಮನೆಗಳಿಗೆ ನೆರೆ ನೀರು ನುಗ್ಗಿದೆ. ಎರಡು ಮನೆಗಳಲ್ಲಿದ್ದವರನ್ನು ಅಗ್ನಿಶಾಮಕ ದಳದವರು ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಎಡೆಬಿಡದೆ ಸುರಿದ ಬಿರುಸಿನ ಮಳೆಗೆ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು.
ಬ್ರಹ್ಮಾವರ ತಾಲ್ಲೂಕಿನಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ಕೆಲವೆಡೆ ಕೃಷಿ ಭೂಮಿ ಜಲಾವೃತಗೊಂಡಿದೆ. ಹಲವಾರು ಮನೆಗಳ ಸುತ್ತಲೂ ಪ್ರವಾಹದ ನೀರು ನಿಂತಿದೆ. ಆರೂರು. ಉಪ್ಪೂರು ಉಗ್ಗೇಲ್ ಬೆಟ್ಟು ಗ್ರಾಮದಲ್ಲಿಯೂ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದು ಅನೇಕ ಮನೆಗಳು ಜಲಾವೃತಗೊಂಡಿದೆ.
ಪಡುಬಿದ್ರಿಯ ಪಾದಬೆಟ್ಟುವಿನ ಹೊಯ್ಗೆ ಪರಿಸರದಲ್ಲಿ ಜಲಾವೃತಗೊಂಡ ಐದು ಮನೆಗಳ ಒಟ್ಟು 15 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತ ಆಗಿದ್ದು, ಕರಾವಳಿ
ಯಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
90 ಮಂದಿ ಸ್ಥಳಾಂತರ: ಕೊಡಗಿನಲ್ಲಿ 90 ಮಂದಿಯನ್ನು ಸ್ಥಳಾಂತರಿಸಿದ್ದು, 4 ಕಾಳಜಿ ಕೇಂದ್ರಗಳಲ್ಲಿ 35 ಮಂದಿಯನ್ನಿರಿಸಲಾಗಿದೆ. 30 ಮನೆಗಳು ಕುಸಿದು, 50 ವಿದ್ಯುತ್ ಕಂಬಗಳು ನೆಲಕಚ್ಚಿವೆ.
ಕುಶಾಲನಗರದ ಗೊಂದಿಬಸವನಹಳ್ಳಿಯ ರೊಂಡೆ ಕೆರೆಯ ಏರಿ ಕುಸಿದು ನೀರು ಜಮೀನುಗಳಿಗೆ ನುಗ್ಗಿದ್ದು, ಯುವಕರು ಮೀನು ಹಿಡಿದು ಸಂಭ್ರಮಿಸಿದರು. ಕುಶಾಲನಗರದಲ್ಲಿ ಏಳು ಬಡಾವಣೆಗಳಿಗೆ ನೀರು ನುಗ್ಗಿದೆ. ಮಡಿಕೇರಿ– ವಿರಾಜಪೇಟೆ ನಡುವಿನ ಬೇತ್ರಿಯಲ್ಲಿ ಕಾವೇರಿ ಹರಿವು ಹೆಚ್ಚಳಗೊಂಡಿದೆ.
ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಂಗಳೂರು– ಮಡಿಕೇರಿ ರಸ್ತೆಯ ಕರ್ತೋಜಿಯಲ್ಲಿ ರಾತ್ರಿ ಸಂಚಾರವನ್ನು ನಿರ್ಬಂಧಿಸಿದ ವಿಷಯ ತಿಳಿಯದವರು ಚೆಕ್‌ಪೋಸ್ಟ್‌ಗಳಲ್ಲಿ ಕಿ.ಮೀಗಟ್ಟಲೆ ನಿಂತಿದ್ದರು.
ಮೈಸೂರು ಜಿಲ್ಲೆಯ ಕಪಿಲಾ ನದಿಪಾತ್ರದಲ್ಲಿ ಪ್ರವಾಹ ಉಂಟಾಗಿದ್ದು, ನಂಜನಗೂಡಿನ 70ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಶ್ರೀಕಂಠೇಶ್ವರ ದೇವಾಲಯದ ಶಿವನ ಪ್ರತಿಮೆಯ ಸ್ಥಳದವರೆಗೆ ನೀರು ನುಗ್ಗಿದೆ. ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಾಲ್ಲೂಕಿನ ಮಲ್ಲನಮೂಲೆ ಮಠದ ಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ. ಸುತ್ತೂರು ಬಳಿ ಸೇತುವೆ ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ.
ನೆರೆಯ ಕೇರಳದ ವಯನಾಡು ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ, ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹರಿಸಲಾಗುತ್ತಿದ್ದು, ಕಪಿಲಾ ನದಿಯು ಅಪಾಯಕಾರಿಯಾಗಿ ಹರಿಯುತ್ತಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಅಡಿಗೂ ಹೆಚ್ಚು ನೀರು ಬಂದಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಮೈಸೂರು–ನಂಜನಗೂಡು ನಡುವೆ ಸಂಚರಿಸುವವರು ಪರ್ಯಾಯ ಮಾರ್ಗವನ್ನು ಅವಲಂಬಿಸಿದ್ದಾರೆ.
ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಶುಕ್ರವಾರವೂ ಮುಂದುವರೆದಿರುವ ಮಳೆಯಿಂದಾಗಿ ತುಂಗಾ, ಭದ್ರಾ, ಶರಾವತಿ, ವರದಾ, ಕುಮದ್ವತಿ ನದಿಗಳು ಉಕ್ಕಿ ಹರಿಯುತ್ತಿವೆ. ಹಳ್ಳ- ಕೊಳ್ಳ, ಕೆರೆ– ಕುಂಟೆಗಳು ಭೋರ್ಗರೆಯುತ್ತಿವೆ.
ದಾವಣಗೆರೆ ವರದಿ: ಈ ಮುಂಗಾರಿನಲ್ಲೇ ಮೊದಲ ಬಾಶರಿ ಜಿಲ್ಲೆಯಲ್ಲಿ ದಿನವಿಡೀ ಮಳೆ ಸುರಿದಿದ್ದರಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆಗಳು, ಜಮೀನುಗಳು ಜಲಾವೃತಗೊಂಡಿವೆ. ಕೆರೆ–ಕಟ್ಟೆಗಳು ತುಂಬಿ ಹರಿಯುತ್ತಿವೆ.
ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಯ ಪ್ರವಾಹದಿಂದಾಗಿ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಪತ್ತೇಪುರ-ಉಕ್ಕಡಗಾತ್ರಿ ರಸ್ತೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬಗಳೂ ಜಲಾವೃತಗೊಂಡಿದ್ದು, ಅಪಾಯ ಆಹ್ವಾನಿಸುತ್ತಿವೆ.
ಕಲಬುರಗಿ ವರದಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಾಧಾರಣವಾಗಿ ಮಳೆಯಾಗಿದೆ.
ಕಲಬುರಗಿ ನಗರದ, ಚಿಂಚೋಳಿ, ಕಾಳಗಿ, ಕಮಲಾಪುರದಲ್ಲಿ ಕೆಲಕಾಲ ಉತ್ತಮವಾಗಿ ಮಳೆ ಸುರಿಯಿತು. ಬೀದರ್ ಜಿಲ್ಲೆಯ ಬೀದರ್, ಹುಲಸೂರ, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಶುಕ್ರವಾರ ಜಿಟಿಜಿಟಿ ಮಳೆಯಾಗಿದೆ.
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶುಕ್ರ
ವಾರವೂ ಮಳೆ ಆರ್ಭಟ ಮುಂದುವರೆದಿದ್ದು, ಭೂಕುಸಿತ ಸೇರಿ ಹಲವು ಹಾನಿ ಸಂಭವಿಸಿದೆ.ಕುಮಟಾ ತಾಲ್ಲೂಕಿನ ಉಳ್ಳೂರಮಠ ಸಮೀಪ ಕುಮಟಾ–ಸಿದ್ದಾಪುರ ರಾಜ್ಯ ಹೆದ್ದಾರಿ–68ರಲ್ಲಿ ಭಾರಿ ಪ್ರಮಾಣದಲ್ಲಿ ಭುಕುಸಿತ ಉಂಟಾಗಿ ರಸ್ತೆಗೆ ಮಣ್ಣಿನ ರಾಶಿ ಆವರಿಸಿಕೊಂಡಿತು. ಇದರಿಂದ ಈ ಮಾರ್ಗ
ದಲ್ಲಿ ಸಂಚಾರ ಸ್ಥಗಿತವಾಯಿತು. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಬಳಿ ಮರ ರಸ್ತೆಗೆ ಉರುಳಿದ್ದು ಹೊನ್ನಾವರ ಹೆದ್ದಾರಿ–69 ರಲ್ಲಿ ಕೆಲ ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಮಾರ್ಗದ ಮೊಸಳೆಗುಂಡಿ, ಸಂಪಕಂಡ, ಚಕ್ಕಡಿ, ಬಂಡಲ ಗ್ರಾಮಗಳ ಬಳಿ ಭೂಕುಸಿತ ಉಂಟಾಗಿ ಮಣ್ಣು, ಮರಗಳು ರಸ್ತೆಯ ಮೇಲೆ ಬಿದ್ದಿದ್ದವು. ಕುಮಟಾ ತಾಲ್ಲೂಕಿನ ಬರ್ಗಿಯಲ್ಲಿ ಗುರುವಾರ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ಶುಕ್ರವಾರವೂ ಕುಸಿತ ಉಂಟಾಯಿತು.
ಶಿರಾಡಿ: ಹಗಲಿನಲ್ಲಿ ವಾಹನಗಳ ಸಂಚಾರಕ್ಕೆ ಅನುವು
ಹಾಸನ: ಬೆಂಗಳೂರು–ಮಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಗುರುವಾರ ಭೂಕುಸಿತದ ನಂತರ, ರಸ್ತೆ ದುರಸ್ತಿಯಾಗುವವರೆಗೆ ರಾಷ್ಟ್ರೀಯ ಹೆದ್ದಾರಿ–75 ರ ಹಾಸನ–ಮಾರನಹಳ್ಳಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಲಾಗಿದೆ.
91 ಗ್ರಾಮಗಳಲ್ಲಿ ಪ್ರವಾಹ ಸಾಧ್ಯತೆ
ಮಂಡ್ಯ: ಇಲ್ಲಿನ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಶುಕ್ರವಾರ ಸಂಜೆ 118 ಅಡಿ ತಲುಪಿದೆ. 120 ಅಡಿ ದಾಟಿದ ಕೂಡಲೇ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನೀರನ್ನು ಕಾವೇರಿ ನದಿಗೆ ಹರಿಸಲಾಗುವುದು. ನದಿಪಾತ್ರದಲ್ಲಿರುವ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.
ಒಂದು ಲಕ್ಷಕ್ಕಿಂತ ಹೆಚ್ಚಿನ ಕ್ಯುಸೆಕ್ ನೀರು ಬಿಡುಗಡೆ ಮಾಡಿದರೆ, ನದಿ ಪಾತ್ರದಲ್ಲಿರುವ ಶ್ರೀರಂಗಪಟ್ಟಣ ತಾಲ್ಲೂಕಿನ- 53, ಪಾಂಡವಪುರ- 15, ಮಳವಳ್ಳಿ- 21 ಹಾಗೂ ಹೇಮಾವತಿ ಜಲಾಶಯ ವ್ಯಾಪ್ತಿಯ ಕೆ.ಆರ್.ಪೇಟೆ- 3 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ತೊಂದರೆಯಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಒಂದು ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಯಿತು.
ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದ್ದರೂ ಹೆದ್ದಾರಿ ಬದಿಯ ಬೆಟ್ಟಗಳು ಕುಸಿಯುವ ಆತಂಕ ಎದುರಾಗಿದೆ. ಶಿರಾಡಿ ಘಾಟ್‌ನ ದೊಡ್ಡತಪ್ಲೆ ಗ್ರಾಮದ ಬಳಿ ಹೆದ್ದಾರಿಯ ಮೇಲೆ ಕುಸಿದಿದ್ದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಬಾಣಗೇರಿ ಹೊಳೆಯು ಸೇತುವೆ ಮೇಲೆ ಹರಿಯುತ್ತಿದ್ದು, ಸಕಲೇಶಪುರ– ಮಾಗೇರಿ– ಸೋಮವಾರಪೇಟೆ ರಸ್ತೆ ಸಂಪರ್ಕ ಕಡಿತವಾಗಿದೆ.
ಮಳೆ ಅವಘಡ; 4 ಸಾವು
* ನದಿ ಪಾಲು: ಸೊರಬ ತಾಲ್ಲೂಕಿನ ಯಡಗೊಪ್ಪ– ಯಲವಾಟ ಗ್ರಾಮಗಳ ಬಳಿ ವಡ್ಡಿಗೆರೆ ಗ್ರಾಮದ ಯಲ್ಲಪ್ಪ (50) ಎಂಬವರು ಮೀನು ಹಿಡಿಯಲು ಹೋಗಿ ದಂಡಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
* ಗೃಹಿಣಿ ಸಾವು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕಗ್ಗುಂಡಿ ಗ್ರಾಮದಲ್ಲಿ ಮನೆಯ ಮಣ್ಣಿನ ಗೋಡೆ ಕುಸಿದು ಗೃಹಿಣಿ ಹೇಮಲತಾ (22) ಮೃತಪಟ್ಟಿದ್ದು, 2 ವರ್ಷದ ಮಗು ಪಾರಾಗಿದೆ. ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೋಗಿ ಬರುವಾಗ ಗೋಡೆ ಕುಸಿಯುತ್ತಿರುವುದು ಗೊತ್ತಾಗುತ್ತಿದ್ದಂತೆಯೇ, ಮಗುವನ್ನು ಹೊರಗಡೆ ತಳ್ಳಿ ಜೀವ ಉಳಿಸಿದ್ದಾರೆ.
* ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿದರಕೆರೆ ಲಂಬಾಣಿ ಹಟ್ಟಿಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಜಯಾನಾಯ್ಕ (49) ಶುಕ್ರವಾರ ಸಾವಿಗೀಡಾಗಿದ್ದಾರೆ.
* ವಿದ್ಯುತ್ ತಗುಲಿ ವಿದ್ಯಾರ್ಥಿನಿ ಸಾವು: ದಕ್ಷಿಣ ಕನ್ನಡ ಜಿಲ್ಲೆಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಲೇಜು ವಿದ್ಯಾರ್ಥಿನಿ ಆಶ್ನಿ ಶೆಟ್ಟಿ (21) ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.