ADVERTISEMENT

ಮಹಾಮಳೆಗೆ ನಲುಗಿದ ನಾಡು: ಆರು ಮಂದಿ ದುರ್ಮರಣ

ಇನ್ನೂ ಕೆಲ ದಿನ ಮುಂದುವರಿಯಲಿರುವ ಮಳೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:45 IST
Last Updated 21 ಅಕ್ಟೋಬರ್ 2019, 19:45 IST
ಆಳಂದ ಪಟ್ಟಣದ ಸಮೀಪದ ದಬ್ಬದಬ್ಬಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನವೊಂದು ಸಿಲುಕಿಕೊಂಡಿರುವುದು –ಪ್ರಜಾವಾಣಿ ಚಿತ್ರ
ಆಳಂದ ಪಟ್ಟಣದ ಸಮೀಪದ ದಬ್ಬದಬ್ಬಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನವೊಂದು ಸಿಲುಕಿಕೊಂಡಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎರಡು ತಿಂಗಳ ಹಿಂದೆ ಬದುಕನ್ನು ನುಚ್ಚುನೂರು ಮಾಡಿದ್ದ ಮಹಾಮಳೆ ಮತ್ತೆ ನಾಡಿನ ನಾನಾ ದಿಕ್ಕುಗಳಲ್ಲಿ ಭೋರ್ಗರೆದು ಸುರಿಯತೊಡಗಿದ್ದು, ನದಿಗಳ ಪ್ರವಾಹ ಉಕ್ಕೇರ ತೊಡಗಿದೆ. ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರು ಜನ ಮೃತಪಟ್ಟಿದ್ದರೆ, ನೀರಲ್ಲಿ ಕೊಚ್ಚಿಹೋಗಿರುವ ಮೂವರ ಸುಳಿವು ಸೋಮವಾರ ರಾತ್ರಿಯವರೆಗೂ ಸಿಕ್ಕಿರಲಿಲ್ಲ.

ಹಾವೇರಿಯಲ್ಲಿ ಮೂರು, ಕೊಪ್ಪಳ, ಬೆಳಗಾವಿಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 5 ಜನ ನೀರಿನಲ್ಲಿ ಮುಳುಗಿ ಹಾಗೂ ದಾವಣಗೆರೆಯಲ್ಲಿ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಜಲಾಶಯದ ನೀರನ್ನು ಹರಿಯಬಿಟ್ಟಿದ್ದರಿಂದಾಗಿ ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ಮಳೆ ಪ್ರಮಾಣ ಬಿರುಸುಗೊಳ್ಳತೊಡಗಿದ್ದರಿಂದ ರಾಜ್ಯದ ಕೆಲವು ನಗರಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸಂಪರ್ಕ ಕಲ್ಪಿಸುವ ರಸ್ತೆಗಳು, ಸೇತುವೆಗಳು ಮುಳುಗಿದ್ದು, ಜನರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಒಟ್ಟಾರೆ ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. ರೈತರ ಕೈಗೆ ಬರುವ ಹೊತ್ತಿನಲ್ಲಿದ್ದ ಬೆಳೆ ಸಂಪೂರ್ಣ ನೆಲಕಚ್ಚಿಹೋಗಿದೆ. ದಿಕ್ಕುಗಾಣದ ಸ್ಥಿತಿಗೆ ರೈತರು ತಲುಪಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ಇದು ಇನ್ನೂ ಮೂರು ದಿನ ಮುಂದುವರಿಯಲಿದೆ. ಕೆಲವು ಜಿಲ್ಲೆಗಳಲ್ಲಿ ಐದು ದಿನ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಗ್ಗು ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಇಂಗಳ ಹಳ್ಳಿಯ ಯರನಹಳ್ಳದ ಮಧ್ಯೆ 15 ತಾಸು ಸಿಲುಕಿದ್ದ ಆಂಧ್ರಪ್ರದೇಶ ಮೂಲದ 10 ಕಾರ್ಮಿಕರನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಿಸಿದ್ದಾರೆ. ತುಪ್ಪರಿ ಹಳ್ಳ ಉಕ್ಕಿದ ಪರಿಣಾಮ ಸೃಷ್ಟಿಯಾದ ನಡುಗಡ್ಡೆಯಲ್ಲಿ ಭಾನುವಾರ ರಾತ್ರಿ ಸಿಲುಕಿದ್ದ ದಂಪತಿಯನ್ನು ರಕ್ಷಿಸಲಾಗಿದೆ.

ಭಾನುವಾರ ರಾತ್ರಿ ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಸವಣೂರಿನ ಯಲವಿಗಿ ರೈಲ್ವೆ ಕೆಳಸೇ ತುವೆಯಲ್ಲಿ ಅರ್ಧದಷ್ಟು ಮುಳುಗಿತ್ತು. ಬಸ್‌ನಲ್ಲಿದ್ದ 35ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸವನಳ್ಳಿ ಬಳಿ ಸೋಮವಾರ ಸಂಜೆ ಡೋಣಿ ನದಿ ಪ್ರವಾಹದಲ್ಲಿ ಇಬ್ಬರು ಯುವಕರು ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ನಡೆದಿದೆ.ಖಾನಾಪುರ ತಾಲ್ಲೂಕಿನಲ್ಲಿ ನೀರು ನಿಂತಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವನ್ನಪ್ಪಿದರೆ, ರಾಯಚೂರು ಹಾಗೂ ಹಾವೇರಿ ಜಿಲ್ಲೆಯಲ್ಲಿ 13–16 ಪ್ರಾಯದ ಯುವಕರಿಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದು, ಅವರ ಸುಳಿವು ಸಿಕ್ಕಿಲ್ಲ. ರಾಮದುರ್ಗ ತಾಲ್ಲೂಕಿನ ರಂಕಲಕೊಪ್ಪ ಗ್ರಾಮದ ಸಮೀಪ‍ ವ್ಯಕ್ತಿಯೊಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ

ಮನೆಗಳಿಗೆ ಹಾನಿ: ಧಾರವಾಡ ಜಿಲ್ಲೆಯಲ್ಲಿ 850 ಮನೆಗಳಿಗೆ ಹಾನಿ ಯಾಗಿದ್ದರೆ, ದಾವಣಗೆರೆ ನಗರದಲ್ಲಿ 500 ಮನೆಗಳಿಗೆ ನೀರು ನುಗ್ಗಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಅಲ್ಲಿಂದ ಹೊರಬರಲು ಜನ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.ಹರಿಹರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ
ಶಾದಿಮಹಲ್‌ನಲ್ಲಿ ಜನ ರಾತ್ರಿ ಕಳೆದಿದ್ದಾರೆ.

ಮಳೆ ಅಬ್ಬರ: ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರಿಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ವೇದಾ ವತಿ ನದಿ ಉಕ್ಕಿ ಹರಿಯುತ್ತಿದೆ. ಅಜ್ಜಂಪುರ ತಾಲ್ಲೂಕಿನಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆ ಏರಿ ಪಡೆದು ಜಮೀನುಗಳಿಗೆ ನೀರು ನುಗ್ಗಿದೆ.

ಮಡಿಕೇರಿಯಲ್ಲಿ ಒಂದು ತಾಸಿಗೂ ಹೆಚ್ಚು ಬಿರುಸಿನ ಮಳೆಯಾಗಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಗಾಳಿ ಬೀಡು, ಮೂರ್ನಾಡು, ಮದೆ ನಾಡು ವ್ಯಾಪ್ತಿಯಲ್ಲಿ ವರುಣ ಅಬ್ಬರಿಸಿ
ದ್ದಾನೆ. ನಾಲ್ಕೈದು ದಿನಗಳಿಂದ ಜೋರು ಮಳೆ ಬೀಳುತ್ತಿದೆ. ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಜನ ಜೀವನ ತತ್ತರಿಸಿದ್ದು, ‌ಹಳೇಬೀಡು ಹೋಬಳಿಯ ಗೋಣಿ ಸೋಮನಳ್ಳಿ ಹಾಗೂ ಬೇಲೂರು ಪಟ್ಟಣದಲ್ಲಿ ತಲಾ ಒಂದು ಮನೆ ಕುಸಿದಿದೆ.

ಸಂತ್ರಸ್ತರ ರಕ್ಷಣೆಗೆ ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪುನಃ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣ ಆಗಿರುವುದರಿಂದ ಸಂತ್ರಸ್ತರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಳಗಾವಿ, ಗದಗ, ಬಾಗಲಕೋಟೆ, ವಿಜಯ‍ಪುರ, ಹಾವೇರಿ ಮತ್ತು ಇತರ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ದೂರವಾಣಿ ಕರೆ ಮಾಡಿದ ಅವರು, ಪ್ರವಾಹದಲ್ಲಿ ಸಿಲುಕಿದವರನ್ನು ತಕ್ಷಣ ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕೆಲಸ ಮಾಡಬೇಕು. ಕಾಳಜಿ ಕೇಂದ್ರ ಗಳಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡಿ ಅವರಿಗೆ ಆಶ್ರಯ ನೀಡಬೇಕು ಎಂದು ಹೇಳಿದರು.

ಮಳೆ ಪೀಡಿತ ಪ್ರದೇಶ ಗಳಲ್ಲಿ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಮತ್ತಿತರ ಸಂಘ ಸಂಸ್ಥೆ ಗಳನ್ನು ಬಳಸಿಕೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ಕ್ಷಣಕ್ಷಣದ ಮಾಹಿತಿಯನ್ನು ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದರು.

15 ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌ ’

ಇದೇ 22 ಹಾಗೂ 23ರಂದು ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ.

ಇನ್ನುಳಿದ ಜಿಲ್ಲೆಗಳಲ್ಲಿ ಬುಧವಾರದವರೆಗೆ ಗುಡುಗು ಸಹಿತ ಮಳೆಯಾಗ ಲಿದ್ದು,‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಅ.24ರಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಗಂಟೆಗೆ 45 ಕಿ.ಮೀ. ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅ.23ರವರೆಗೆ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.

ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ 17 ಸೆಂ.ಮೀ.ಮಳೆಯಾಗಿದೆ. ಯಡವಾಡ 16, ರಾಮದುರ್ಗ 15, ಲಕ್ಕವಳ್ಳಿ 13, ಶಿವಾನಿ 12, ಹರಿಹರ 11, ಬೆಳಗಾವಿ, ಹಾವೇರಿ 9, ಉಡುಪಿ, ಬೆಳವಾಡಿ 8, ಮೂಡಿಗೆರೆ, ಕಡೂರು, ಕಾರ್ಕಳದಲ್ಲಿ ತಲಾ 7 ಸೆಂ.ಮೀ.ಮಳೆಯಾಗಿದೆ.

ನಗರದಲ್ಲಿ ಆರೆಂಜ್ ಅಲರ್ಟ್

ನಗರದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಅ.25ರವರೆಗೆ ಮಳೆ ಮುಂದುವರಿಯಲಿದ್ದು, ಕನಿಷ್ಠ 124.5 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಮಳೆ ಸುರಿಯಲಿದೆ. ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಕೇರಳದ 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಕೇರಳದ ಹಲವೆಡೆ ಸೋಮವಾರ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅಡಚಣೆಯಾಗಿದ್ದು, ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.