ADVERTISEMENT

Karnataka Weather | ರಾಜ್ಯದ ವಿವಿಧೆಡೆ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 22:00 IST
Last Updated 16 ಅಕ್ಟೋಬರ್ 2024, 22:00 IST
<div class="paragraphs"><p>ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಯಲ್ಲಮ್ಮ ದೇವಿ ದೇವಸ್ಥಾನ ಬುಧವಾರ ಜಲಾವೃತಗೊಂಡಿತ್ತು</p></div>

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಯಲ್ಲಮ್ಮ ದೇವಿ ದೇವಸ್ಥಾನ ಬುಧವಾರ ಜಲಾವೃತಗೊಂಡಿತ್ತು

   

ಮಡಿಕೇರಿ/ಮಂಗಳೂರು: ರಾಜ್ಯದ ವಿವಿಧೆಡೆ ಬುಧವಾರವೂ ಮಳೆ ಮುಂದುವರಿದಿದೆ. ಕೊಡಗು ಜಿಲ್ಲೆಯ ಅಲ್ಲಲ್ಲಿ  ಜೋರು ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನಿವಿಡೀ ಮೋಡ ಮುಸುಕಿದ ವಾತಾವರಣ ಇತ್ತು.

ದಕ್ಷಿಣ ಕನ್ನಡದಲ್ಲಿ ಆಗಾಗ ಸಮಾನ್ಯ, ಉಡುಪಿ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.  ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬಿರುಸಿನ ಮಳೆ ಸುರಿದಿದೆ.

ADVERTISEMENT

ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ, ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು 1,938 ಕ್ಯುಸೆಕ್‌ಗೆ ಏರಿಕೆಯಾಗಿದೆ. ಸಿದ್ದಾಪುರ ಹಾಗೂ ಸುಂಟಿಕೊಪ್ಪದಲ್ಲಿ ಧಾರಾಕಾರ ಮಳೆ ಬಿದ್ದಿತು. ವಿರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಸಾಧಾರಣ ಮಳೆಯಾಯಿತು.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಸೋನೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರ, ಬಾಳೆಹೊನ್ನೂರು, ಆಲ್ದೂರು, ತರೀಕೆರೆ, ಅಜ್ಜಂಪುರ ಸುತ್ತಮುತ್ತ ಮಧ್ಯಾಹ್ನದವರೆಗೆ ಸತತ ಮಳೆಯಾಗಿದೆ.

ಮೀನುಗಾರರಿಗೆ ಮುನ್ಸೂಚನೆ: ವಾಯುಭಾರ ಕುಸಿತದಿಂದಾಗಿ ಇದೇ 19ರ ವರೆಗೆ ಭಾರಿ ಮಳೆ ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಈಗಾಗಲೇ ತೆರಳಿರುವವರು ತಕ್ಷಣ ವಾಪಸ್ ಬರಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರು ಸೂಚಿಸಿದ್ದಾರೆ.

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕ ಭಾಗದ ವಿವಿಧೆಡೆ ಬುಧವಾರವೂ ವರುಣನ ಅಬ್ಬರ ಮುಂದುವರಿದಿತ್ತು.

ಕಲಬುರಗಿ ಸೇರಿದಂತೆ ಅಫಜಲಪುರ, ಕಾಳಗಿ, ಚಿಂಚೋಳಿಯ ಹಲವೆಡೆ ಬಿರುಸಿನ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಾದ್ಯಂತ ಬೆಳಿಗಿನ ಜಾವದಿಂದಲೇ ಮೋಡಕವಿದ ವಾತಾವರಣ, ಜಿಟಿಜಿಟಿ ಮಳೆಯಾಗಿದೆ.

ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮಳೆಯಾಗಿದೆ. ಬೀದರ್, ಭಾಲ್ಕಿ, ಚಿಟಗುಪ್ಪದಲ್ಲಿ ಸಾಧಾರಣ ಮಳೆಯಾಗಿದೆ. ಯಾದಗಿರಿಯಲ್ಲಿ ಅರ್ಧ ತಾಸು ಸಾಧಾರಣ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ಕೊಕಟನೂರ (ಬೆಳಗಾವಿ ಜಿಲ್ಲೆ): ಅಥಣಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳ ಕೊಕಟನೂರ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬುಧವಾರ ಹಳ್ಳದ ನೀರು ನುಗ್ಗಿದೆ. ದೇವಸ್ಥಾನದ ಆವರಣ ತುಂಬಿಕೊಂಡು, ಗರ್ಭಗುಡಿಗೂ ನೀರು ನುಗ್ಗಿದೆ. ಕೊಕಟನೂರ ಸುತ್ತಮುತ್ತ ನಸುಕಿನಿಂದ ನಿರಂತರ ಮಳೆ ಸುರಿಯಿತು. ದೇವಸ್ಥಾನದ ಬಳಿಯ ಕೆರೆ ತುಂಬಿ ಅಲ್ಲಿನ ನೀರು ಹಳ್ಳವಾಗಿ ಹರಿದು ದೇವಸ್ಥಾನದ ಆವರಣ ಪ್ರವೇಶಿಸಿತು. ದೇವಿಯ ಮೂರ್ತಿ ಕೂಡ ಅರ್ಧದಷ್ಟು ಮುಳುಗಿತು. 

ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆಗೆ ಧಾರಾಕಾರ ಮಳೆ ಸುರಿಯಿತು. ನಗರಹೊರವಲಯದ ಯಳ್ಳೂರು ಮಾರ್ಗ ದಲ್ಲಿ ಸುಮಾರು 300 ಹೆಕ್ಟೇರ್‌ ಭತ್ತದ ಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿತ್ತು.

ಮುಂದುವರಿದ ಜಡಿ ಮಳೆ: ತುಮಕೂರು, ಕೋಲಾರ, ಚಿಕ್ಕ ಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಗಳಲ್ಲಿ ಸತತ ಎರಡನೇ ದಿನವಾದ ಬುಧ ವಾರವೂ ಜಡಿ ಮಳೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.