ADVERTISEMENT

ಮತ್ತಷ್ಟು ಮಳೆ: ತುಂಗಾ ಜಲಾಶಯ ಭರ್ತಿ; ಭದ್ರಾ, ಲಿಂಗನಮಕ್ಕಿಗೂ ಒಳಹರಿವು ಏರಿಕೆ

ತುಂಬಿ ಹರಿದ ಕುಮಾರಧಾರಾ ನದಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 3:12 IST
Last Updated 28 ಜೂನ್ 2024, 3:12 IST
ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಉದ್ಯಾನ ಗುರುವಾರ ಜಲಾವೃತಗೊಂಡಿತ್ತು.
ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಉದ್ಯಾನ ಗುರುವಾರ ಜಲಾವೃತಗೊಂಡಿತ್ತು.   

ಮಂಗಳೂರು/ ಮಡಿಕೇರಿ/ಶಿವಮೊಗ್ಗ: ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯು ಗುರುವಾರವೂ ಮುಂದುವರಿದಿದೆ. ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ರಾಜ್ಯದಲ್ಲಿ ಮೊದಲು ಭರ್ತಿಯಾದ ಜಲಾಶಯ ಇದು. 

‘3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್.  ಜಲಾಶಯಕ್ಕೆ ಒಳಹರಿವು 6,766 ಕ್ಯುಸೆಕ್ ಇದೆ. ಎರಡು ಕ್ರೆಸ್ಟ್  ಗೇಟ್‌ಗಳನ್ನು ತೆರೆದು 5,285 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಉಳಿದ ಹೆಚ್ಚುವರಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ’ ಎಂದು ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಳಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ನದಿ–ತೊರೆಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆ ಮುನ್ಸೂಚನೆ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ 28ರಂದು ಶುಕ್ರವಾರ ಕೂಡ ಜಿಲ್ಲಾ ಆಡಳಿತ ರಜೆ ಘೋಷಿಸಿದೆ. 

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಓವರ್‌ಬ್ರಿಜ್‌ ಕೆಳಭಾಗದಲ್ಲಿ ಗುರುವಾರವೂ ನೀರು ಹರಿದು ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣಿಸಿದವರು ಪ್ರಯಾಸಪಟ್ಟರು. ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿದಿದ್ದು ಸ್ನಾನಘಟ್ಟ ಮುಳುಗಡೆ ಆಗಿದೆ. ನೆರೆಯ ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ. 

ಕೊಡಗು ಜಿಲ್ಲೆಯ ಭಾಗಮಂಡಲ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಬುಧವಾರ ಇಡೀ ರಾತ್ರಿ ಭಾರಿ ಮಳೆ ಸುರಿದಿದೆ. ಇದರಿಂದ ಹಾರಂಗಿ ಜಲಾಶಯದ ಒಳಹರಿವು ಸಾವಿರ ಕ್ಯುಸೆಕ್ ದಾಟಿದ್ದು, ರೈತರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ಜಲಾಶಯದ ಒಳ ಹರಿವು ಬುಧವಾರ 810 ಕ್ಯುಸೆಕ್ ಇದ್ದದ್ದು, ಗುರುವಾರ 1,425 ಕ್ಯುಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಆಗಿದ್ದು, ಸದ್ಯ 2,832.65 ಅಡಿಗಳಷ್ಟೇ ನೀರಿದೆ.

ಕೊಡಗಿನಲ್ಲಿ ಗುರುವಾರ ಮಳೆ ಅಲ್ಪ ಬಿಡುವು ನೀಡಿದ್ದರೂ, ಬಿರುಗಾಳಿ, ಶೀತಗಾಳಿ ಬೀಸಿತ್ತು. ದಟ್ಟ ಮೋಡಕವಿದ ವಾತಾವರಣವಿದ್ದು, ಜನ ಚಳಿಯಿಂದ ಥರಗುಟ್ಟುತ್ತಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಧಾರಾಕಾರವಾಗಿ ಸುರಿದಿದ್ದ ಮಳೆ, ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿರಾಮ ನೀಡಿತ್ತು. ಸಂಜೆ ಸಾಧಾರಣ ಮಳೆ ಸುರಿದಿದೆ. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಮೂಡಿಗೆರೆ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ಕುದುರೆಮುಖ, ಸಂಸೆ, ಕೊಟ್ಟಿಗೆಹಾರ ಸುತ್ತಮುತ್ತ ಹೆಚ್ಚು ಮಳೆಯಾಗಿದ್ದು, ಭದ್ರಾ, ಹೇಮಾವತಿ ಮತ್ತು ತುಂಗಾ ನದಿಗಳಲ್ಲಿ ನೀರು ಹರಿವಿನ ಪ್ರಮಾಣ ಜಾಸ್ತಿಯಾಗಿದೆ. ಗುರುವಾರ ಹಲವೆಡೆ ಸಾಧಾರಣ ಮಳೆಯಾಗಿದ್ದು, ಮಲೆನಾಡು ಭಾಗದಲ್ಲಿ ಜೀವಕಳೆ ಬಂದಿದೆ. 

ರೈತರಲ್ಲಿ ಆಶಾಭಾವ: 

ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಗುರುವಾರ ಒಳಹರಿವು 4,082 ಕ್ಯುಸೆಕ್‌ಗೆ ಏರಿಕೆಯಾಗಿದೆ. ಬುಧವಾರ ಒಳಹರಿವು 2,276 ಕ್ಯುಸೆಕ್ ಇತ್ತು. ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ವಾರದಿಂದ ಭದ್ರೆಗೆ ಒಳಹರಿವು ಹೆಚ್ಚುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಶಾಭಾವ ಮೂಡಿದೆ.

186 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 120.8 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 137 ಅಡಿ ನೀರಿನ ಸಂಗ್ರಹವಿತ್ತು. ಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 66 ಅಡಿ ನೀರಿನ ಅಗತ್ಯವಿದೆ.

ಲಿಂಗನಮಕ್ಕಿ ಜಲಾಶಯದ ಒಳಹರಿವು 16,984 ಕ್ಯುಸೆಕ್‌ಗೆ ಏರಿಕೆಯಾಗಿದೆ. ಬುಧವಾರ ಒಳಹರಿವು 9,033 ಕ್ಯುಸೆಕ್‌ ಇತ್ತು. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ 24 ಗಂಟೆಯಲ್ಲಿ 7,900 ಕ್ಯುಸೆಕ್‌ನಷ್ಟು ಒಳಹರಿವು ಹೆಚ್ಚಳಗೊಂಡಿದೆ. 1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 1,747.60 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,740.20 ಅಡಿ ನೀರಿನ ಸಂಗ್ರಹ ಇತ್ತು.

ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಭತ್ತದ ಗದ್ದೆಗಳು ಬುಧವಾರ ಜಲಾವೃತಗೊಂಡಿದ್ದವು.
ಮಂಜು ಮುಸುಕಿದ್ದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಗುರುವಾರ ಮಳೆ ನಡುವೆ ಕೊಡೆ ಹಿಡಿದು ಪ್ರವಾಸಿಗರು ಭೇಟಿ ನೀಡಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಶಾಲೆಯ ಮೇಲೆ ಮಳೆಯಿಂದ ಗುರುವಾರ ಕಲ್ಲು ಹಾಗೂ ಮಣ್ಣು ಕುಸಿದು ಶಾಲಾ ಕೊಠಡಿಯ ಕಿಟಕಿ ಗೋಡೆಗಳಿಗೆ ಹಾನಿಯಾಗಿದೆ

17 ಸಾವಿರ ಕ್ಯುಸೆಕ್‌ಗೆ ಏರಿದ ಕಬಿನಿ ಒಳಹರಿವು

ಮೈಸೂರು: ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವು ಇನ್ನಷ್ಟು ಹೆಚ್ಚಿದ್ದು ಗುರುವಾರ ಮುಂಜಾನೆ ಜಲಾಶಯಕ್ಕೆ 16977 ಕ್ಯುಸೆಕ್‌ ಪ್ರಮಾಣದ ನೀರು ಹರಿದು ಬಂದಿತ್ತು. 2284 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 2269.22 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಿಂದ ನದಿಗೆ 1 ಸಾವಿರ ಕ್ಯುಸೆಕ್‌ ನೀರು ಹರಿಯುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಒಳಹರಿವು ಕೇವಲ 115 ಕ್ಯುಸೆಕ್‌ನಷ್ಟಿತ್ತು. ಮೈಸೂರಿನಲ್ಲಿ ಗುರುವಾರ ದಿನವಿಡೀ ಜಿಟಿಜಿಟಿ ಮಳೆಯಾಗಿದ್ದು ತಂಪು ವಾತಾವರಣವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.