ADVERTISEMENT

ಉಕ್ಕಿ ಹರಿದ ವರದಾ, ಕಾವೇರಿ... ಹಲವೆಡೆ ಸೇತುವೆಗಳು ಜಲಾವೃತ

ಬೆಳಗಾವಿಯಲ್ಲಿ ಮಳೆ ಇಳಿಮುಖ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಗದಗದಲ್ಲಿ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 20:52 IST
Last Updated 24 ಜುಲೈ 2023, 20:52 IST
ಅಘನಾಶಿನಿ ನದಿ ಉಕ್ಕೇರಿದ ಪರಿಣಾಮ ಕುಮಟಾ ತಾಲ್ಲೂಕಿನ ದೀವಗಿ, ಮಣಕಿ, ಹೆಗಡೆ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿರುವುದು
ಚಿತ್ರ:ಗೋಪಿ ಚಾಲಿ
ಅಘನಾಶಿನಿ ನದಿ ಉಕ್ಕೇರಿದ ಪರಿಣಾಮ ಕುಮಟಾ ತಾಲ್ಲೂಕಿನ ದೀವಗಿ, ಮಣಕಿ, ಹೆಗಡೆ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿರುವುದು ಚಿತ್ರ:ಗೋಪಿ ಚಾಲಿ   

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಅಘನಾಶಿನಿ, ವರದಾ, ಹೇಮಾವತಿ, ಕಾವೇರಿ, ತುಂಗಾ, ಭದ್ರಾ, ಕಾಳಿ ನದಿಗಳು ಮೈದುಂಬಿ ಹರಿಯುತ್ತಿವೆ.

ನಿರಂತರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕುಮಟಾ ತಾಲ್ಲೂಕಿನ ಹೆಗಡೆ, ಮುರೂರು, ಮಣಕಿ, ದಿವಗಿ ಗ್ರಾಮಗಳು ಜಲಾವೃತಗೊಂಡಿವೆ.

ಹೊನ್ನಾವರದ ಗುಂಡಬಾಳ ನದಿ ಪಾತ್ರದಲ್ಲೂ ನೆರೆ ಸ್ಥಿತಿ ಮುಂದುವರಿದಿದೆ. ಜೊಯಿಡಾ ತಾಲ್ಲೂಕಿನ ಕ್ಯಾಸಲ್‍ರಾಕ್ ಬಳಿ ರಸ್ತೆ ಜಲಾವೃತಗೊಂಡು ಗೋವಾ– ಕ್ಯಾಸಲ್‍ರಾಕ್ ಮಾರ್ಗದಲ್ಲಿ ಎರಡನೇ ದಿನವೂ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

ತಾಲ್ಲೂಕಿನ ಗಾಂಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಪೋಲಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದಿದೆ. ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಗಾಳಿ ಶಾಲೆಯ ಚಾವಣಿ ಮುರಿದಿದೆ.

ಅಘನಾಶಿನಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಅದರಲ್ಲಿಯೇ ಜನರು ಸಾಗಿದರು ಚಿತ್ರ:ಗೋಪಿ ಜಾಲಿ

ಸೇತುವೆಗಳು ಮುಳುಗಡೆ, ಗುಡ್ಡ ಕುಸಿತ: ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು 21 ಸೇತುವೆಗಳು ಮುಳುಗಡೆಯಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸ್ಲೆ–ಸುಬ್ರಹ್ಮಣ್ಯ ನಡುವಣ ರಸ್ತೆಯಲ್ಲಿ ಮಣ್ಣು ಕುಸಿತ ಹಾಗೂ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿ 8 ಮನೆಗಳಿಗೆ ಹಾನಿಯಾಗಿದೆ.

ಹಾಸನ– ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ 75ರ ಕೊಲ್ಲಹಳ್ಳಿ ಬಳಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಪಕ್ಕದ ತಡೆಗೋಡೆ ಕುಸಿದಿದ್ದು, ಮಣ್ಣು ಕುಸಿತ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಜೇಶ್ವರ– ಪಂಜ– ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಹೆದ್ದಾ ರಿಯ ಸೇತುವೆ ಜಲಾವೃತವಾಗಿದೆ. ನೇತ್ರಾವತಿ ನದಿ ಬಂಟ್ವಾಳದಲ್ಲಿ ಅಪಾ ಯದ ಮಟ್ಟದಲ್ಲಿ ಹರಿಯುತ್ತಿದ್ದು, ಪಾಣೆ ಮಂಗಳೂರು, ಆಲಡ್ಕದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯ ಬಿದಿರುತಳ ಹಾಗೂ ಆಲೇಕಾನ್ ನಡುವೆ ಗುಡ್ಡ ಕುಸಿತಗೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡ ಲಾಯಿತು. ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗಲಿ ಹಳ್ಳ ತುಂಬಿ ಹರಿದು ಬೆಳಗಲಿ ಮತ್ತು ಬೊಮ್ಮಸಮುದ್ರ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಹೋಗಿದೆ.

ಕೊಡಗು ಜಿಲ್ಲೆಯಲ್ಲಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಗುಡ್ಡ, ಮಣ್ಣುಕುಸಿತ ಆರಂಭವಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ತಂಡ (ಎನ್‌ಡಿಆರ್‌ಎಫ್‌) ಸನ್ನದ್ಧ ಸ್ಥಿತಿಯಲ್ಲಿದೆ. ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೇರಿ– ಮಂಗಳೂರು ರಸ್ತೆಯ ಅಬ್ಬಿಕೊಲ್ಲಿ ಜಲಪಾತದ ಸಮೀಪ ರಸ್ತೆಬದಿಯಲ್ಲಿ ಮಣ್ಣು ಕುಸಿದು ಆತಂಕ ಮೂಡಿಸಿದೆ. ಮಡಿಕೇರಿ– ಸೋಮವಾರಪೇಟೆ ರಸ್ತೆ, ಕಾಲೂರು – ಗಾಳಿಬೀಡು ರಸ್ತೆ, ಕರಿಕೆ– ಭಾಗಮಂಡಲ ರಸ್ತೆಯಲ್ಲೂ ಮಣ್ಣು ಕುಸಿದಿದೆ.

ಭಾಗಮಂಡಲ– ಮಡಿಕೇರಿ ಹಾಗೂ ಭಾಗಮಂಡಲ– ನಾಪೋಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಪರ್ಕ ತಪ್ಪಿದೆ. ಬೆಂಗೂರು ಗ್ರಾಮದ ದೋಣಿಕಡುವಿನಿಂದ ಚೇರಂಬಾಣೆ ಸಂರ್ಪಕಿಸುವ ರಸ್ತೆಯೂ ಸಂಪೂರ್ಣ ಜಲಾವೃತಗೊಂಡಿದೆ. ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಮಂಡಿಯುದ್ದದ ನೀರು ಹರಿಯುತ್ತಿದ್ದು, ಜನ ತೆಪ್ಪ ಬಳಸುತ್ತಿದ್ದಾರೆ.

ನಾಪೋಕ್ಲು– ಮಡಿಕೇರಿ ಸಂಪರ್ಕ ರಸ್ತೆಯ ಕೊಟ್ಟಮುಡಿ ಎಂಬಲ್ಲಿ ನದಿ ನೀರಿನ ಹರಿವು ಹೆಚ್ಚಿದರೆ, ನಾಪೋಕ್ಲು ಹೋಬಳಿ ಮತ್ತು ಮಡಿಕೇರಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಒಂದೇ ದಿನ ಜಿಲ್ಲೆಯಲ್ಲಿ 77 ವಿದ್ಯುತ್ ಕಂಬಗಳು ನೆಲಕಚ್ಚಿವೆ.

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದ್ದು, ಭಗಂಡೇಶ್ವರ ದೇಗುಲದ ಮುಖ್ಯ ದ್ವಾರದ ಎರಡು ಮೆಟ್ಟಿಲುಗಳವರೆಗೆ ನೀರು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಭಾಗಮಂಡಲದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಎನ್‌ಡಿಆರ್‌ಎಫ್‌ ತಂಡ ಭಾಗಮಂಡಲಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದೆ.

ಶಿವಮೊಗ್ಗದ ತುಮರಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ಭತ್ತದ ಗದ್ದೆಗಳು ಮುಳುಗಡೆ ಆಗಿವೆ. ತುಮರಿ ಸಮೀ‍ಪದ ಕೊಡಸರ ಗ್ರಾಮವನ್ನು ಸಂಪರ್ಕಿಸುವ ಗಣಪೋಡಿ ಬಳಿ ಕಿರುಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ 40 ಮನೆಗಳ ಸಂಪರ್ಕ ಕಡಿತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲ್ಲೂಕು ಗಾಂಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಾಪೋಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಸತತ ಮಳೆಗೆ ಕುಸಿದು ಬಿದ್ದಿರುವುದು      –ಪ್ರಜಾವಾಣಿ ಚಿತ್ರ

ಜಲಾಶಯಕ್ಕೆ ಹೆಚ್ಚಿದ ಹರಿವು: ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಷಣಕ್ಷಣವೂ ಹೆಚ್ಚುತ್ತಿದ್ದು, ನದಿಗೆ ಸದ್ಯ 30 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಅದರಿಂದ ಕುಶಾಲನಗರ ಸಾಯಿ ಬಡಾವಣೆಗೆ ನೀರು ನುಗ್ಗಿದೆ. ಸಾಯಿ ದೇವಾಲಯದ ಆವರಣ ಜಲಾವೃತವಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.14 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ ಒಳ ಹರಿವು 21,247 ಕ್ಯುಸೆಕ್‌ಗೆ ಏರಿಕೆ ಯಾಗಿದೆ. ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ 31,815 ಕ್ಯುಸೆಕ್ ನೀರು ಹರಿದುಬರುತ್ತಿದೆ‌.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಸಿಂಗಟಾಲೂರು ಬ್ಯಾರೇಜ್‌ನ 15 ಗೇಟ್‌ಗಳನ್ನು ತೆರೆಯ ಲಾಗಿದ್ದು, ತುಂಗಭದ್ರಾ ನದಿಯ ಒಳ ಹರಿವಿನ ಪ್ರಮಾಣ 64,023 ಕ್ಯುಸೆಕ್‌ಗೆ ಹೆಚ್ಚಳವಾಗಿದೆ. ಮಹಾರಾಷ್ಟ್ರ ಹಾಗೂ ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ, ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಂದೇ ದಿನ ಸರಾಸರಿ 10 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಈ ಮೂಲಕ ಜಲಾಶಯ ಅರ್ಧ ಭರ್ತಿಯಾಗಿದೆ.

ಶಿರಸಿ ತಾಲ್ಲೂಕಿನ ವರದಾ ನದಿ ಉಕ್ಕೇರಿ ನದಿ ತಟದ 300 ಹೆಕ್ಟೇರ್ ಗೂ ಅಧಿಕ ಕೃಷಿ ಭೂಮಿ ಸೋಮವಾರ ಜಲಾವೃತವಾಗಿದೆ

ಕಾಳಜಿ ಕೇಂದ್ರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ 4, ಹೊನ್ನಾವರ ತಾಲ್ಲೂಕಿನ 5 ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು 164 ಮಂದಿ ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಜಿಲ್ಲೆಯಾದ್ಯಂತ 39 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾಳಿನದಿ ಒಳಹರಿವು ಹೆಚ್ಚುತ್ತಿದ್ದು ಕದ್ರಾ ಜಲಾಶಯದಿಂದ ಆರು ಕ್ರಸ್ಟ್ ಗೇಟ್‍ಗಳಿಂದ 61 ಸಾವಿರ ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. 

ಶಿರಸಿ ತಾಲ್ಲೂಕಿನ ವರದಾ ನದಿ ಉಕ್ಕೇರಿ ನದಿ ತಟದ 300 ಹೆಕ್ಟೇರ್ ಗೂ ಅಧಿಕ ಕೃಷಿ ಭೂಮಿ ಜಲಾವೃತವಾಗಿದೆ.  ನದಿ ನೀರು ಏರಿಕೆಯಿಂದ ಅಜ್ಜರಣಿ ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಂಡಿದೆ. 

ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳಗಲಿ–ಬೊಮ್ಮಸಮುದ್ರ ರಸ್ತೆಯು ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿದೆ /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಭಾರಿ ವಾಹನಗಳ ಸಂಚಾರ ನಿಷೇಧ ಶಿರಸಿ

ಕುಮಟಾ–ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿಮನೆ ಘಟ್ಟದ ಸಮೀಪ ಭಾನುವಾರ ರಾತ್ರಿ ರಾಗಿಹೊಸಳ್ಳಿ ಬಳಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸೋಮವಾರ ಮಣ್ಣನ್ನು ತೆಗೆದು ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

‘ದೊಡ್ಡ ಹಾಗೂ ಭಾರದ ವಾಹನಗಳ ಸಂಚಾರದಿಂದ ಮತ್ತೆ ಭೂಮಿ ಕುಸಿಯುವ ಆತಂಕ ಇದೆ. ಜೊತೆಗೆ ಕಾಮಗಾರಿ ಪೂರ್ಣಗೊಳ್ಳದ್ದರಿಂದ ಭಾರಿ ವಾಹನಗಳ ಸಂಚಾರದಿಂದ ಇತರ ವಾಹನಗಳ ಓಡಾಟಕ್ಕೂ ತೊಂದರೆ ಆಗುತ್ತಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ’ ಎಂದು ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್ ತಿಳಿಸಿದ್ದಾರೆ.

ಮಡಿಕೇರಿ– ಮಂಗಳೂರು ರಸ್ತೆ ಸಂಚಾರ ಮುಕ್ತ

ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಸೋಮವಾರ ಸಂಜೆ ಕುಸಿದಿದ್ದ ಮಣ್ಣ ಹಾಗೂ ಮರವನ್ನು ಜಿಲ್ಲಾಡಳಿತ ರಾತ್ರಿ ತೆರವುಗೊಳಿಸಿದ್ದರಿಂದ, ಎರಡೂ ಬದಿಯಲ್ಲೂ ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದ ವಾಹನಗಳು ಸಂಚರಿಸಿದವು.

ರಸ್ತೆಯ ಬದಿಯಲ್ಲಿ ಮಣ್ಣಿನ ರಾಶಿಯನ್ನು ತೆರವು ಮಾಡಿದರೆ, ಗುಡ್ಡದಿಂದ ಮತ್ತಷ್ಟು ಮಣ್ಣು ಜಾರಬಹುದೆಂಬ ಆತಂಕದಿಂದ ತೆರವುಗೊಳಿಸಿಲ್ಲ. ಸದ್ಯ, ವಾಹನಗಳು ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಂಚರಿಸುತ್ತಿವೆ.

ಕುಶಾಲನಗರ; ಶವಸಂಸ್ಕಾರಕ್ಕೆ ಪರದಾಟ

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಕ್ಕೆ ಗ್ರಾಮದಲ್ಲಿ ಶವಸಂಸ್ಕಾರ ಮಾಡುತ್ತಿದ್ದ ಕಾವೇರಿ ನದಿದಂಡೆಯು ನೀರಿನಲ್ಲಿ ಮುಳುಗಿದ್ದರಿಂದ ಮಂಚಮ್ಮ ಎಂಬುವವರ ಶವಸಂಸ್ಕಾರಕ್ಕೆ ಸಂಬಂಧಿಕರು ಪರದಾಡಿದರು.

ನಂತರ ತಹಶೀಲ್ದಾರ್ ಪ್ರಕಾಶ್ ಅವರು ವಾಟರ್ ಗೇಜ್ ಬಳಿ ಇರುವ ಅರಣ್ಯ ಇಲಾಖೆಯ ಸಸ್ಯಕೇಂದ್ರದ ಬಳಿ ಗದ್ದೆಹಳ್ಳದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರು. ಸುರಿಯುವ ಮಳೆಯಲ್ಲಿಯೇ ಮಂಚಮ್ಮ ಅವರ ಅಂತ್ಯಸಂಸ್ಕಾರವನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ನೆರವೇರಿಸಿದರು.

ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್’

ಬೆಂಗಳೂರು: ರಾಜ್ಯದ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜುಲೈ 25 ಹಾಗೂ 26ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಅದೇ ದಿನ ಕಲಬುರಗಿ, ವಿಜಯಪುರ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ. ಜುಲೈ 27 ರಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

100 ಅಡಿ ಸನಿಹಕ್ಕೆ ಕೆಆರ್‌ಎಸ್‌

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಾಗಿದ್ದು ನೀರಿನ ಮಟ್ಟ 100 ಅಡಿ ಸನಿಹಕ್ಕೆ ತಲು ಪಿದೆ. 24 ಗಂಟೆಯಲ್ಲಿ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದೆ.

ಭಾನುವಾರ ರಾತ್ರಿ ಜಲಾಶಯದ ನೀರಿನ ಮಟ್ಟ 92.60 ಅಡಿ ಇತ್ತು, ಸೋಮವಾರ ರಾತ್ರಿ 8 ಗಂಟೆಯ ವೇಳೆಗೆ ನೀರಿನ ಮಟ್ಟ 97.50 ಅಡಿಗೆ ಹೆಚ್ಚಾಗಿದೆ. 44,436 ಕ್ಯುಸೆಕ್‌ ಒಳಹರಿವು ಇದ್ದು 5,452 ಹೊರಹರಿವು ದಾಖಲಾಗಿದೆ. ಮಂಗಳವಾರ ಸಂಜೆ ವೇಳೆಗೆ 100 ಅಡಿ ದಾಟಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.