ADVERTISEMENT

ಮಳೆ ಅಬ್ಬರ | ಉಕ್ಕೇರಿದ ನದಿಗಳು, ಸೇತುವೆ ಮುಳುಗಡೆ: ಕರಾವಳಿಯಲ್ಲಿ ರೆಡ್‌ ಅಲರ್ಟ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 1:12 IST
Last Updated 9 ಜುಲೈ 2024, 1:12 IST
ಉಡುಪಿಯ ಬಡಗುಪೇಟೆಯಲ್ಲಿ ಅಂಗಡಿಗಳಿಗೆ ಮಳೆ ನೀರು ನುಗ್ಗಿತ್ತು
ಉಡುಪಿಯ ಬಡಗುಪೇಟೆಯಲ್ಲಿ ಅಂಗಡಿಗಳಿಗೆ ಮಳೆ ನೀರು ನುಗ್ಗಿತ್ತು   

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಧಾರಾಕಾರ ಮಳೆಯಾಗಿದೆ. ಬ್ರಹ್ಮಾವರ, ಕೋಟ ಪರಿಸರದಲ್ಲಿ ವ್ಯಾಪಕ‌ ಮಳೆಯಾಗುತ್ತಿದ್ದು, ಕೋಟದ ಗಿಳಿಯಾರು, ಬನ್ನಾಡಿ, ಮಣೂರು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಗುಂಡಿಬೈಲು ಬಳಿಯ ಪಾಡಿಗಾರು ಸಮೀಪ ಪಿ.ಜಿ. ಒಂದರಲ್ಲಿದ್ದ ವಿದ್ಯಾರ್ಥಿನಿಯರನ್ನು ಅಗ್ನಿಶಾಮಕ ದಳದವರು ಸುರಕ್ಷಿತ ಪ್ರದೇಶಕ್ಕೆ ಬೋಟ್‌ನಲ್ಲಿ ಸ್ಥಳಾಂತರಿಸಿದರು. 

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ನದಿಗಳು ತುಂಬಿ ಹರಿಯುತ್ತಿವೆ.

ADVERTISEMENT

ಇದೇ 9 ಹಾಗೂ 10ರಂದು ಕೂಡ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗಿನಿಂದ ಕೂಡಿ ಭಾರಿ ಮಳೆಯಾಗಲಿದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಈ ಮೂರೂ
ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಹಾಗೂ 10ರಂದು ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.

ಚಿಕ್ಕಮಗಳೂರು ನಗರ, ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಹೇಮಾವತಿ, ತುಂಗಾ, ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ.

ಸೋಮವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತ್ರಾಸಿಯಲ್ಲಿ 21 ಸೆಂ.ಮೀ, ಮಳೆಯಾಗಿದೆ.

ಬೆಳಗಾವಿ ವರದಿ: ಸೋಮವಾರವೂ ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 62,070 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಲಿಕವಾಡ-ದತ್ತವಾಡ ಸೇತುವೆ ಸೋಮವಾರ ಜಲಾವೃತ ಗೊಂಡಿದ್ದು, ಕರ್ನಾಟಕ-ಮಹಾರಾಷ್ಟ್ರ ನಡುವಿನ ಸಂಪರ್ಕ ಕಡಿತಗೊಂಡಿದೆ. ದೂಧಗಂಗಾ ನದಿಯಲ್ಲಿ ನೀರು ಹರಿವು ಹೆಚ್ಚಿದ್ದರಿಂದ ಯಕ್ಸಂಬಾ ಹೊರವಲಯದ ಹಜರತ್ ಮನ್ಸೂರ್‌ ವಲಿ ದರ್ಗಾ ಜಲಾವೃತಗೊಂಡಿದೆ.

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗಿದೆ. ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕು ಹಾಗೂ ಗ್ರಾಮೀಣ ಭಾಗದಲ್ಲಿ 20 ನಿಮಿಷ ಉತ್ತಮವಾಗಿ ಮಳೆ ಸುರಿದಿದೆ. 

ಶಿವಮೊಗ್ಗ ವರದಿ: ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು, ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಿದೆ.

ಹುಲಿಕಲ್‌ ಘಾಟಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು 12,000 ಕ್ಯುಸೆಕ್‌ನಷ್ಟು ಏರಿಕೆಯಾಗಿದೆ.

ಇಂದು, ನಾಳೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 9 ಮತ್ತು 10ರಂದು ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

ಬೀದರ್, ಕಲಬುರ್ಗಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು,ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ.

ಹಾರಂಗಿ: ಸಾವಿರ ಕ್ಯುಸೆಕ್‌ ನೀರು ನದಿಗೆ

ಮಡಿಕೇರಿ: ಇಲ್ಲಿನ ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಸಂಜೆ ನದಿಗೆ ನೀರನ್ನು ಹೊರಬಿಡಲಾಯಿತು.

ಜಲಾಶಯದ ಎಲ್ಲ 4 ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ಒಂದು ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಜಲಾಶಯ ತುಂಬಲು ಇನ್ನೂ 10 ಅಡಿಗಳು ಬಾಕಿ ಇದೆ. ನದಿ ದಂಡೆಯ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಭರ್ತಿಗೂ ಮುನ್ನವೇ ನೀರನ್ನು ಹೊರಬಿಡಲಾಗುತ್ತಿದೆ.‌ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿದ್ದು, ನದಿ ದಂಡೆಯ ನಿವಾಸಿಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತಿರುವ ಸಂಪಾಜೆ ಹೋಬಳಿಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದ ಇಲ್ಲಿಗೆ ಸಮೀಪದ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ತೋಜಿ ಬಳಿ ರಸ್ತೆಯ ಒಂದು ಬದಿ ಉಬ್ಬಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ. ಇನ್ನೂ ಹೆಚ್ಚು ಮಳೆಯಾದರೆ ಈ ಮಣ್ಣು ರಸ್ತೆಗೆ ವ್ಯಾಪಿಸುವ ಸಾಧ್ಯತೆ ಇದೆ.

ನಾಪೋಕ್ಲು - ಭಾಗಮಂಡಲ ಮುಖ್ಯರಸ್ತೆಯ ಚೋನಕೆರೆ ಎಂಬಲ್ಲಿ ಬೃಹತ್ ಗಾತ್ರದ ಮರ ಮುರಿದುಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತು. ವಿದ್ಯುತ್ ತಂತಿಗಳು ತುಂಡಾಗಿ ಗ್ರಾಮಾಂತರ ಪ್ರದೇಶಗಳ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತು. ಕುರುಳಿ -ಎಮ್ಮೆ ಮಾಡು ಮುಖಾಂತರ ಬಳಸು ರಸ್ತೆಯಲ್ಲಿ ವಾಹನಗಳು ಸಾಗಿದವು. ನಂತರ ಮರವನ್ನು ತೆರವುಗೊಳಿಸಲಾಯಿತು.

(ಹಾಸನ ವರದಿ): ಜಿಲ್ಲೆಯಾದ್ಯಂತ ಸೋಮವಾರ ಮುಂಗಾರು ಚುರುಕು ಪಡೆದಿದ್ದು, ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಹಾಸನ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, 8448 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಆಗಾಗ ತುಂತುರು ಮಳೆಯಾಯಿತು.

ಕರಾವಳಿಗೆ ‘ಆರೆಂಜ್ ಅಲರ್ಟ್‌’

ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 9 ಮತ್ತು 10ರಂದು ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ‘ಆರೆಂಜ್ ಅಲರ್ಟ್‌’ ಘೋಷಿಸಿದೆ. 

ಬೀದರ್, ಕಲಬುರ್ಗಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು,ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. 

ಕರಾವಳಿ ಭಾಗದಲ್ಲಿ ಗಂಟೆಗೆ 35 ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕದ್ರಾ (23 ಸೆಂ.ಮೀ), ಕುಮಟಾ (22 ಸೆಂ.ಮೀ), ಗೇರುಸೊಪ್ಪ (20 ಸೆಂ.ಮೀ), ಶಿರಾಲಿ (20 ಸೆಂ.ಮೀ), ಮಂಕಿ (19 ಸೆಂ.ಮೀ), ಉಡುಪಿಯಲ್ಲಿ (18 ಸೆಂ.ಮೀ) ಮಳೆಯಾಗಿದೆ.

ಉಡುಪಿ ನಗರದ ಜಲಾವೃತ ರಸ್ತೆಯಲ್ಲೇ ತೆರಳಿದ ದ್ವಿಚಕ್ರ ವಾಹನ ಸವಾರರು
ಬಾರಿ ಮಳೆ ಗಾಳಿಗೆ ಪೆರ್ಡೂರು ಸಮೀಪದ ಕುಡ್ತುರ್ಬೈಲ್ ಎಂಬಲ್ಲಿ ಮನೆಯೊಂದರ ಮೇಲ್ಚಾವಣಿ ಹಾರಿ ಹೋಗಿದೆ
ಉಡುಪಿಯ ಪಾಡಿಗಾರಿನ ಪ್ರವಾಹಪೀಡಿತ ಪ್ರದೇಶದಲ್ಲಿದ್ದ ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು
ಚಾರ್ಮಾಡಿ ಘಾಟಿಯಲ್ಲಿ ಮಂಜು ಮತ್ತು ಮಳೆಯ ನಡುವೆ ವಾಹನಗಳು ಸಂಚರಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.