ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:50 IST
Last Updated 2 ಜೂನ್ 2024, 15:50 IST
   

ಬೆಂಗಳೂರು/ತುಮಕೂರು: ರಾಜ್ಯದ ಹಲವೆಡೆ ಶನಿವಾರ ರಾತ್ರಿ ಮತ್ತು ಭಾನುವಾರ ಮಳೆಯಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಜೋರು ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು.

ಸಂಜೆ 6.30ರ ಸುಮಾರಿಗೆ ಆರಂಭವಾದ ಮಳೆ, ನಂತರ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಸುರಿಯಿತು. ಪೀಣ್ಯ–ದಾಸರಹಳ್ಳಿ, ವಿದ್ಯಾಪೀಠ, ಹಡ್ಸನ್‌ ವೃತ್ತ, ಎಂ.ಜಿ.ರಸ್ತೆ, ಶೇಷಾದ್ರಿ ರಸ್ತೆ, ಬನಶಂಕರಿ, ಜಯನಗರ, ಜೆಪಿ ನಗರ, ಮೈಸೂರು ರಸ್ತೆ, ಜೆ.ಸಿ.ರಸ್ತೆ, ಕೆ.ಆರ್‌.ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತ, ಕೆ.ಎಚ್‌.ರಸ್ ವ್ಯಾಪ್ತಿಯಲ್ಲಿ ಜೋರು ಮಳೆಯಾಯಿತು.

ಆನಂದರಾವ್‌ ಸರ್ಕಲ್‌ ಕೆಳಸೇತುವೆ ಸೇರಿದಂತೆ ನಗರದ ವಿವಿಧ ಅಂಡರ್‌ ಪಾಸ್‌ಗಳು ಜಲಾವೃತಗೊಂಡಿದ್ದವು. ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಟ್ರಿನಿಟಿ ನಿಲ್ದಾಣದ ಬಳಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಹಳಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಮೆಟ್ರೊ ರೈಲು ಸಂಚಾರ ವ್ಯತ್ಯಯಗೊಂಡಿತು.

ADVERTISEMENT

ತುಮಕೂರು ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ 10 ಸೆ.ಮೀ ಮಳೆ ಬಿದ್ದಿದೆ. ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ 8 ಸೆ.ಮೀ, ಕಡಬದಲ್ಲಿ 6 ಸೆ.ಮೀ ಮಳೆ ಸುರಿದಿದೆ.

ಒಂದು ವಾರ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಶುರುವಾಗಿದ್ದು, ಪೂರ್ವ ಮುಂಗಾರಿನ ಬೆಳೆಗೆ ಜೀವ ಕಳೆ ಬಂದಿದೆ. ಹುಳಿಯಾರು ಪಟ್ಟಣದ ರಾಮಗೋಪಾಲ್‌ ವೃತ್ತದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಹರಿದು ಹೋಗಲು ಆಗದೆ ರಸ್ತೆ ಕೆರೆಯಂತಾಗಿತ್ತು. 

ಕಲಬುರಗಿ ವರದಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ ತಾಲ್ಲೂಕು ಹಾಗೂ ಬೀದರ್ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿಯಿತು.

ಚಿಂಚೋಳಿಯಲ್ಲಿ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿದರೆ, ಕಲಬುರಗಿಯಲ್ಲಿ 10 ನಿಮಿಷ ಸುರಿಯಿತು. ಬೀದರ್ ಜಿಲ್ಲೆಯ ಕಮಲನಗರ, ಭಾಲ್ಕಿ, ಹುಲಸೂರಿನಲ್ಲಿ ಉತ್ತಮ ಮಳೆಯಾಗಿದ್ದು, ಭಾಲ್ಕಿ ತಾಲ್ಲೂಕಿನ ಹಲಸಿ ತುಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಮಾಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕಮಲನಗರ, ಮದನೂರ, ಸೋನಾಳ, ಖತಗಾಂವ್ ಗ್ರಾಮಗಳಲ್ಲಿ ಮಳೆಯಾಯಿತು.

ವಿಜಯಪುರ ವರದಿ: ನಗರದಲ್ಲಿ ಭಾನುವಾರ ಸಂಜೆ ಅರ್ಧ ತಾಸು ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆ ಸುರಿಯಿತು.

ವಾರದಿಂದ ಮಳೆಯಿಲ್ಲದೇ ಬೇಸಿಗೆ ಬಿಸಿಲು 40 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಉಷ್ಣಾಂಶ ಹೆಚ್ಚಳದಿಂದ ಜನ ಹೈರಾಣಾಗಿದ್ದರು. ಭಾನುವಾರ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.