ಬೆಂಗಳೂರು: ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಿದ್ದು, ಈ ಬಾರಿ ಜುಲೈ ತಿಂಗಳಲ್ಲಿ 1136.31 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 756.61 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.
2022ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಇದೇ ಅವಧಿಯಲ್ಲಿ 1162.04 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು. ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ, ಸೂಪಾ ಮತ್ತು ಮಾಣಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಪ್ರತಿದಿನ 50.41 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವಷ್ಟು ನೀರು ಶೇಖರಣೆಯಾಗಿದೆ.
ಕಳೆದ ವರ್ಷ ಆಗಸ್ಟ್ ಮೊದಲ ವಾರದಲ್ಲಿ 209.10 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 348.89 ದಶಲಕ್ಷ ಯೂನಿಟ್ ಉತ್ಪಾದನೆಯಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.
ಮುಂಗಾರು ಆರಂಭವಾದಾಗಿನಿಂದ ಶರಾವತಿ ಜಲ ವಿದ್ಯುತ್ ಸ್ಥಾವರದ 10 ಘಟಕಗಳಲ್ಲೂ ಉತ್ಪಾದನೆ ನಿರಂತರವಾಗಿದೆ. ಮಳೆಗಾಲದ ಕಾರಣ ವಿದ್ಯುತ್ ಬೇಡಿಕೆಯೂ ತಗ್ಗಿರುವುದರಿಂದ, ಉಷ್ಣವಿದ್ಯುತ್ ಸ್ಥಾವರದ ಮೇಲಿನ ಒತ್ತಡವೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ 217.97 ದಶಲಕ್ಷ ಯೂನಿಟ್ ಬಳಕೆಯಾಗುತ್ತಿದೆ. ನಿತ್ಯ, ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ 60.96 ದಶಲಕ್ಷ, ಜಲವಿದ್ಯುತ್ ಘಟಕಗಳಿಂದ 58.17 ದಶಲಕ್ಷ , ಕೇಂದ್ರೀಯ ವಿದ್ಯುತ್ ಜಾಲದಿಂದ 47.81 ದಶಲಕ್ಷ, ಯುಪಿಸಿಎಲ್‌ನಿಂದ 17.27 ದಶಲಕ್ಷ ಮತ್ತು ನವೀಕರಿಸಬಹುದಾದ ಇಂಧನಗಳಿಂದ 87.96 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೊರಗಡೆಯಿಂದ 1.32 ದಶಲಕ್ಷ ಯೂನಿಟ್ ಬರುತ್ತಿದೆ.
ಜಲಾಶಯಗಳಲ್ಲಿ ಈಗ ಸಂಗ್ರಹವಾಗಿರುವ ನೀರು ಬಳಸಿ ನಿತ್ಯ 232.66 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಸದ್ಯ 250 ದಿನ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರು ಜಲಾಶಯಗಳಲ್ಲಿ ಲಭ್ಯವಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.