ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ಮಳೆ ಮುಂದುವರೆದಿದ್ದು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ನದಿಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.
ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಜೋರು ಮಳೆಯಾಗುತ್ತಿದೆ. ಕೊಡಗಿನ ಭಾಗಮಂಡಲದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಸಿಲೆ, ಅಡ್ಡಹೊಳೆ ಮೊದಲಾದ ಕಡೆಗಳಲ್ಲಿ ಮಳೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಉತ್ತರ ಕನ್ನಡದ ಹೊನ್ನಾವರದ ಗುಂಡಬಾಳ ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದೆ.
ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಡಿಕೇರಿ: ಕೊಡಗು ಜಿಲ್ಲೆಯ ಭಾನುವಾರ ಮಳೆಯ ಅಬ್ಬರ ಮುಂದುವರಿದಿದೆ. ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಾಪೋಕ್ಲು– ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರು ಬಳಿ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತಗೊಂಡಿದೆ. ಭಾಗಮಂಡಲ– ನಾಪೋಕ್ಲು ರಸ್ತೆಯಲ್ಲೂ ನೀರು ಹರಿಯುತ್ತಿದೆ.
ತಾಲ್ಲೂಕು ಆಡಳಿತ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಮಳೆ ಇದೇ ರೀತಿ ಮುಂದುವರೆದಲ್ಲಿ ಪರಿಹಾರ ಕೇಂದ್ರಕ್ಕೆ ಎಲ್ಲರನ್ನೂ ಕಳುಹಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮಳೆ ಅಬ್ಬರ ಮುಂದುವರೆದಿದ್ದು ಹೊನ್ನಾವರದ ಗುಮಡಬಾಳ ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲ್ಲೂಕಿನ ಶಾಲೆ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಧಾರವಾಡ: ಅಳ್ನಾವರ ತಾಲ್ಲೂಕಿನ ಕಂಬಾರಗಣವಿ ಗ್ರಾಮ ಬಳಿ ಬಂಡಿ ಹಳ್ಳದ ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ ತೊಡಕಾಗಿದ್ದ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವೀಕ್ಷಿಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಇಡೀ ಭಾರಿ ಮಳೆಯಾಗಿದೆ. ಹಲವೆಡೆ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
ಸುಬ್ರಹ್ಮಣ್ಯ ಕೊಲ್ಲಮೊಗ್ರು, ಬಿಸಿಲೆ, ಅಡ್ಡಹೊಳೆ ಮೊದಲಾದ ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಘಟ್ಟ ಪ್ರದೇಶಗಳಲ್ಲಿ ಸ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಮುಳುಗಿದೆ.
ಶಿರಸಿ: ಜಲಾವೃತವಾದ ಕೃಷಿ ಭೂಮಿ
ಶಿರಸಿ: ತಾಲ್ಲೂಕಿನ ವರದಾ ನದಿಯ ಉಪನದಿಯಾದ ಇಲ್ಲಿನ ರಾಮ್ ಜಿ ಹೊಳೆ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಕ್ಕಿದ್ದು, ಸಮೀಪದ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.