ADVERTISEMENT

ರಾಜ್ಯದ 19 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 19:31 IST
Last Updated 14 ಏಪ್ರಿಲ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಸುಳಿಗಾಳಿ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಏ.15ರಂದು ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.‍ಪಾಟೀಲ ತಿಳಿಸಿದರು.

‘ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿತಾಪಮಾನ ಹೆಚ್ಚಳದಿಂದ ರಾಜ್ಯದಲ್ಲಿ ದಿಢೀರ್ ಮಳೆಯಾಗುತ್ತಿದೆ.ಬುಧವಾರವೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ’ ಎಂದರು.

‘ಗುರುವಾರ ಸಹ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಏ.17 ರಿಂದ ರಾಜ್ಯದಲ್ಲಿ ಮಳೆ ತಗ್ಗಿ, ಒಣಹವೆ ಮುಂದುವರಿಯಲಿದೆ. ಆದರೂ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು’ ಎಂದವರು ತಿಳಿಸಿದರು.

ಮಳೆ–ಎಲ್ಲಿ, ಎಷ್ಟು?: ಕಲಬುರ್ಗಿ, ನಿಪ್ಪಾಣಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಬೆಳಗಾವಿ, ಧಾರವಾಡ, ಚಿಕ್ಕೋಡಿ, ಜಮಖಂಡಿ, ಕಮಲಾಪುರ, ವಿಜಯಪುರ, ಬೈಲಹೊಂಗಲದಲ್ಲಿ ತಲಾ 1 ಸೆಂ.ಮೀ ಮಳೆ ಸುರಿದಿದೆ.ರಾಯಚೂರಿನಲ್ಲಿ37.4 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ದಾವಣಗೆರೆ, ಕೊಪ್ಪಳ, ವಿಜಯಪುರದಲ್ಲಿ ತಲಾ 36 ಹಾಗೂ ಬೀದರ್‌ನಲ್ಲಿ 16 ಸೆಂ.ಮೀ ಕನಿಷ್ಠ ತಾಪಮಾನ ದಾಖಲಾಗಿದೆ.

ರಾಜ್ಯದಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯಲ್ಲೂ ತಂಪಾದ ವಾತಾವರಣ ಇರುತ್ತಿದೆ. ಆದರೆ, ರಾತ್ರಿ ವೇಳೆ ಸೆಕೆ ಎಂದಿನಂತೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.