ADVERTISEMENT

ಮಲೆನಾಡು–ಕರಾವಳಿಯಲ್ಲಿ ಭಾರಿ ಮಳೆ: ಪ್ರವಾಸ ಮುಂದೂಡಲು ಮನವಿ

ಕೊಡಗಿನಲ್ಲಿ ಶಾಲಾ– ಕಾಲೇಜುಗಳಿಗೆ ಇಂದು ರಜೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:43 IST
Last Updated 30 ಜುಲೈ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕಮಗಳೂರು/ಮಂಗಳೂರು/ಮೈಸೂರು: ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸೋಮವಾರ ರಾತ್ರಿಯಿಂದ ಮಳೆ ಮತ್ತೆ ರಭಸ ಪಡೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಕೆ.ಆರ್.ಎಸ್‌ನಿಂದ 1.10 ಲಕ್ಷ ಕ್ಯುಸೆಕ್‌ ಮತ್ತು ಕಬಿನಿಯಿಂದ 80 ಸಾವಿರ ಕ್ಯುಸೆಕ್‌ ಸೇರಿ ಒಟ್ಟು 2 ಲಕ್ಷ ಕ್ಯುಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. 

ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ನದಿಗೆ 1 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತದೆ.

ADVERTISEMENT

ಕೊಡಗು ಜಿಲ್ಲೆಯ ಭಾಗಮಂಡಲ, ಸಿದ್ದಾಪುರ, ವಿರಾಜಪೇಟೆ ಹಾಗೂ ಕುಶಾಲನಗರದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜುಲೈ 31 ಮತ್ತು ಆಗಸ್ಟ್ 1ರಂದು ಪ್ರವಾಸಿಗರು ಜಿಲ್ಲೆಯತ್ತ ಪ್ರವಾಸವನ್ನು ಮುಂದೂಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ನೀಡಿದ್ದಾರೆ. ಜಿಲ್ಲೆಯ ಕುಟ್ಟ, ಪೊನ್ನಂಪೇಟೆ, ಗೋಣಿಕೊಪ್ಪಲು ಭಾಗದಲ್ಲಿ ಮಳೆ ಅತೀವ ಬಿರುಸಿನಿಂದ ಸುರಿಯುತ್ತಿದೆ. ಹವಾಮಾನ ಇಲಾಖೆ ‘ರೆಡ್‌ ಅಲರ್ಟ್’ ಘೋಷಿಸಿದ್ದು,  ಜುಲೈ 31ರಂದು ಜಿಲ್ಲೆಯ ಎಲ್ಲ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

‘ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾ ಬುಡನ್‌ ಗಿರಿ ರಸ್ತೆಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿದಿದೆ. ಮಳೆ ಇರುವುದರಿಂದ ಭೂಕುಸಿತ ಉಂಟಾಗುವ ಮುನ್ಸೂಚನೆ ಇದೆ. ಆಗಸ್ಟ್‌ 15ರವರೆಗೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಬಾರದು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಎಲ್ಲ ಚಾರಣ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಕಳಸದಲ್ಲಿ 25 ಸೆಂ.ಮೀ. ಮಳೆ

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಕಳಸದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 25 ಸೆಂ.ಮೀ ಮಳೆಯಾಗಿದೆ.  ಭಾಗಮಂಡಲದಲ್ಲಿ 24 ಸೆಂ.ಮೀ,  ಮಾಸ್ತಿಕಟ್ಟೆಯಲ್ಲಿ 24 ಸೆಂ.ಮೀ., ಚಕ್ರಾದಲ್ಲಿ 22, ಯಡೂರು 21.7 ಹಾಗೂ ಹುಲಿಕಲ್‌ನಲ್ಲಿ 21 ಸೆಂ.ಮೀ.,  ಆಗುಂಬೆಯಲ್ಲಿ 23 ಸೆಂ.ಮೀ ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.