ADVERTISEMENT

ರಾಜ್ಯದಲ್ಲಿ ಮುಂದುವರಿದ ಮಳೆ: ಕೊಚ್ಚಿಹೋದ ಕಾರು, ಟ್ರ್ಯಾಕ್ಟರ್‌ ಪಲ್ಟಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:38 IST
Last Updated 22 ಅಕ್ಟೋಬರ್ 2024, 16:38 IST
   

ಚಿತ್ರದುರ್ಗ/ಹಾಸನ: ಸೋಮವಾರ ರಾತ್ರಿ ಧಾರಾಕಾರ ಸುರಿದ ಮಳೆಗೆ ವಿವಿಧೆಡೆ ರಸ್ತೆಗಳು, ಮನೆಗಳು ಜಲಾವೃತವಾಗಿವೆ.  ಚಿತ್ರದುರ್ಗ ಜಿಲ್ಲೆಯಲ್ಲಿ 120 ಮನೆಗಳಿಗೆ ಹಾನಿಯಾಗಿದೆ. ಹಾಸನ ಜಿಲ್ಲೆಯಲ್ಲಿ ತಮ್ಲಾಪುರ–ಉದ್ದೂರು ನಡುವಿನ ರಿಂಗ್‌ ರಸ್ತೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿ, ಮಂಗಳವಾರ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ಜಲಾವೃತಗೊಂಡಿದೆ. ಭಾರಿ ಮಳೆಯಿಂದಾಗಿ ಸೋಮವಾರ ರಾತ್ರಿ ಇಲ್ಲಿನ ಪೊಲೀಸ್‌ ಠಾಣೆ ಕಟ್ಟಡ ಸಂಪೂರ್ಣ ಜಲಾವೃತವಾಗಿತ್ತು. ಕಟ್ಟಡದೊಳಗೂ ನೀರು ನುಗ್ಗಿದ್ದರಿಂದ ಕೆಲಸ– ಕಾರ್ಯಕ್ಕೆ ಅಡ್ಡಿಯಾಯಿತು.

ಸಿರಿಗೆರೆ ಸಮೀಪದ ಲಕ್ಷ್ಮೀಸಾಗರದ ಸರ್ಕಾರಿ ಪ್ರೌಢಶಾಲೆಯ ಆವರಣ ಜಲಾವೃತಗೊಂಡಿದ್ದರಿಂದ ಸ್ಥಳೀಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ತರಗತಿ ನಡೆಸಲಾಯಿತು.  

ADVERTISEMENT

ಗಜ್ಜುಗಾನಹಳ್ಳಿ ಬಳಿ ನೀರಿನ ರಭಸಕ್ಕೆ ಕಲ್ಲು ತುಂಬಿದ್ದ ಟ್ರಾಕ್ಟರ್‌ ಪಲ್ಟಿಯಾಗಿದ್ದು, ಪಕ್ಕಕ್ಕೆ ಹೋಗಿ ಬಿದ್ದಿದೆ. ಬೋಸೆದೇವರಹಟ್ಟಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ಹಾಗೂ ಮನಮೈನಹಟ್ಟಿ ಬಳಿ ಆಟೊ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಒಳಗಿದ್ದವರು ಕೆಳಗಿಳಿದು ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 44ರ ಕೆಳ ಸೇತುವೆಯಲ್ಲಿ ಸಂಗ್ರಹವಾಗಿರುವ ಮಳೆ ನೀರಿನಲ್ಲಿ ಎರಡು ಕಾರು ಮುಳುಗಿದ್ದವು. ಕಾರಿನಲ್ಲಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಸಬ್ಬೇನಹಳ್ಳಿ ಮಂಚನಬಲೆ ಗ್ರಾಮದ ನಡುವೆ ಕೇಳ ಸೇತುವೆಯಲ್ಲಿಯೂ ಹಲವು ವಾಹನಗಳು ಮಳೆ ನೀರಿನಲ್ಲಿ ಸಿಲುಕಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.