ಕಾರವಾರ: ಜಿಲ್ಲೆಯಾದ್ಯಂತ ಸೋಮವಾರವೂ ಉತ್ತಮ ಮಳೆಯಾಗಿದ್ದು, ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಎರಡು ಕಡೆ ಗುಡ್ಡ ಕುಸಿದಿದೆ. ಸದಾಶಿವಗಡ– ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಕುಸಿದಿದ್ದ ಗುಡ್ಡ ತೆರವುವರೆಗೂ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜೊಯಿಡ ಮೂಲಕ ದಾಂಡೇಲಿ, ಬೆಳಗಾವಿ, ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಒಂದು ವಾರದ ಹಿಂದೆಯೂ ಇಲ್ಲಿ ದೊಡ್ಡ ಗಾತ್ರದ ಕಲ್ಲುಗಳು ರಸ್ತೆಗೆ ಬಿದ್ದಿದ್ದವು. ಜೊಯಿಡಾ ತಾಲ್ಲೂಕಿನ ಬಾಪೇಲಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿದೆ.
ಮಣ್ಣು ತೆರವು ಕಾರ್ಯಾಚರಣೆ ಜಾರಿಯಲ್ಲಿದ್ದು, ಕಾರವಾರಕ್ಕೆ ಹೋಗುವ ವಾಹನಗಳು ಯಲ್ಲಾಪುರ– ಅಂಕೋಲಾದ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
24 ಗಂಟೆಗಳಲ್ಲಿ ಕಾರವಾರ ತಾಲ್ಲೂಕಿನಲ್ಲಿ ಒಂದು ಮನೆ ಹಾನಿಗೀಡಾಗಿದೆ. ಕುಮಟಾ ತಾಲ್ಲೂಕಿನಲ್ಲಿ ನಾಲ್ಕು, ಹಳಿಯಾಳ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ತಲಾ ಎರಡು ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಜಿಲ್ಲೆಯಾದ್ಯಂತ 26 ಮನೆಗಳು ಭಾಗಶಃ ಕುಸಿದಿವೆ.
ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಹಿಂಪಡೆದಿದ್ದು, ಜುಲೈ 15ರವರೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಕೃಷ್ಣಾ ನದಿ ಹರಿವಿನಲ್ಲಿ ಏರಿಕೆ: (ಬೆಳಗಾವಿ ವರದಿ): ಜಿಲ್ಲೆಯಲ್ಲಿ ಸೋಮವಾರವೂ ಉತ್ತಮ ಮಳೆಯಾಗಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಮಳೆ ಕಾರಣ ಜಿಲ್ಲೆ ವ್ಯಾಪ್ತಿಯಲ್ಲಿ ನದಿಗಳಲ್ಲಿ ನೀರಿನಹರಿವು ಹೆಚ್ಚಾಗಿದೆ.
ಮಹಾರಾಷ್ಟ್ರ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 70 ಸಾವಿರ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ನದಿಯಿಂದ 19 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಹತ್ತಿರ 89 ಸಾವಿರ ಕ್ಯುಸೆಕ್ ನೀರು ಬರುತ್ತಿದೆ.
ಜಿಲ್ಲೆಯ ಬೆಳಗಾವಿ ನಗರ–ತಾಲ್ಲೂಕು, ಖಾನಾಪುರ, ಚನ್ನಮ್ಮನ ಕಿತ್ತೂರು, ಯರಗಟ್ಟಿ, ಚಿಕ್ಕೋಡಿ, ಗೋಕಾಕ ತಾಲ್ಲೂಕಿನಲ್ಲಿ ಕೂಡ ಉತ್ತಮ ಮಳೆ ಸುರಿದಿದೆ.
ಆಲಮಟ್ಟಿ (ವಿಜಯಪುರ): ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್ ದಾಟಿದೆ. ಮುನ್ನೆಚ್ಚರಿಕೆಯಾಗಿ ಜಲಾಶಯ ಭರ್ತಿಗೂ ಇನ್ನೂ 2.5 ಮೀಟರ್ ಬಾಕಿ ಇರುವಾಗಲೇ 18 ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿದ್ದು 75 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ಕರಾವಳಿ ಭಾಗದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಇತರೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ವೇಗವು ಗಂಟೆಗೆ 65 ಕಿ.ಮೀ. ವರೆಗೂ ತಲುಪುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.