ADVERTISEMENT

ಹಲವು ಜಿಲ್ಲೆಗಳಲ್ಲಿ ಮಳೆಯ ಸಿಂಚನ

ಮರ ಬಿದ್ದು ಶಿರಾಡಿ ಘಾಟ್‌ನಲ್ಲಿ ಸಂಚಾರ ಸ್ಥಗಿತ* ಕಲ್ಯಾಣ ಕರ್ನಾಟಕದ ವಿವಿಧೆಡೆಯೂ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 18:49 IST
Last Updated 13 ಮೇ 2024, 18:49 IST
ಮರ ಬಿದ್ದಿದ್ದರಿಂದ ಶಿರಾಡಿ ಘಾಟ್‌ನಲ್ಲಿ ಸೋಮವಾರ ಬೆಳಿಗ್ಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು
ಮರ ಬಿದ್ದಿದ್ದರಿಂದ ಶಿರಾಡಿ ಘಾಟ್‌ನಲ್ಲಿ ಸೋಮವಾರ ಬೆಳಿಗ್ಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು   

ಕಲಬುರಗಿ/ಚಿಕ್ಕಮಗಳೂರು/ಮಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ, ಸೋಮವಾರ ಬೆಳಗಿನ ಜಾವ ಮಳೆಯಾಗಿದ್ದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ನೆಮ್ಮದಿ ತಂದಿದೆ. 

ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಮಳೆ ಸುರಿದಿದೆ. ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ  ಸಿಡಿಲು ಬಡಿದು ಕುರಿಗಾಹಿ ಗೋವಿಂದಪ್ಪ ಬಸಲಿಂಗಪ್ಪ (26) ಮೃತಪಟ್ಟಿದ್ದಾರೆ. 

ಚಿಕ್ಕಮಗಳೂರಲ್ಲಿ ಮಳೆ ಎಡೆಬಿಡದೆ ಗಂಟೆಗಟ್ಟೆಲೆ ಸುರಿಯಿತು. ಬರದಿಂದ ಬಳಲಿದ್ದ ಕಡೂರು, ತರೀಕೆರೆ ತಾಲ್ಲೂಕಿನಲ್ಲಿ ಹದ ಮಳೆಯಾಗಿದೆ. ಅಜ್ಜಂಪುರ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ.  ಮಲೆನಾಡು ಭಾಗವಾದ ಎನ್.ಆರ್.ಪುರ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಸಂತಸ ಉಂಟು ಮಾಡಿದೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ ಪ್ರದೇಶಗಳಲ್ಲಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ನದಿ ಹಾಗೂ ಹೊಳೆಗಳಲ್ಲಿ ನೀರು ಹರಿದು ಹೋಗುವಷ್ಟು ಬಿರುಸಾಗಿ ಮಳೆಯಾಗಿದೆ. ಜಿಲ್ಲೆಯ ಜನತೆಯಲ್ಲಿ ಮನೆಮಾಡಿದ್ದ ಕುಡಿಯುವ ನೀರಿನ ಕೊರತೆ ಎದುರಾಗಬಹುದು ಎಂಬ ಆತಂಕವನ್ನು ಈ ಮಳೆ ದೂರ ಮಾಡಿದೆ. ಮಂಗಳೂರು ನಗರದಲ್ಲಿ ಸೋಮವಾರ ಮುಂಜಾನೆ ಸುಮಾರು ಅರ್ಧ ಗಂಟೆ ತುಂತುರು ಮಳೆಯಾಗಿದೆ.

ಮೈಸೂರು ವರದಿ: ಮೈಸೂರು ಭಾಗದ ಹಾಸನ ಮತ್ತು ಚಾಮರಾಜನಗರದಲ್ಲಿ ಉತ್ತಮ ಮಳೆಯಾಗಿದೆ. ಹಾಸನ, ಅರಕಲಗೂಡು, ಚನ್ನರಾಯಪಟ್ಟಣ, ಹಿರೀಸಾವೆ, ನುಗ್ಗೇಹಳ್ಳಿ, ಹಳೇಬೀಡು, ಕೊಣನೂರು, ಜಾವಗಲ್‌ನಲ್ಲಿ ಉತ್ತಮ ಮಳೆಯಾಗಿದೆ.

ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಮರ ಉರುಳಿ ಬಿದ್ದು 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಅರಣ್ಯ, ಹೆದ್ದಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಸುತ್ತಮುತ್ತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. 

ಬಳ್ಳಾರಿ/ವಿಜಯನಗರ ವರದಿ: ಬಳ್ಳಾರಿ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.  ತೋರಣಗಲ್‌ ಹೋಬಳಿಯ ತುಮಟಿ ಗ್ರಾಮದಲ್ಲಿ ಭಾರಿ ಮಳೆ, ಗಾಳಿಯಿಂದ ಬಾಳೆ ಬೆಳೆಗೆ ಹಾನಿಯಾಗಿದೆ.

ಚಿತ್ರದುರ್ಗ ವರದಿ: ಚಳ್ಳಕೆರೆ, ಹೊಳಲ್ಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಉತ್ತಮವಾಗಿ ಮಳೆ ಸುರಿದಿದೆ. ಬಿರುಗಾಳಿ, ಮಿಂಚು ಕಾಣಿಸಿಕೊಂಡಿದ್ದರಿಂದ ಅಲ್ಲಲ್ಲಿ ಮರ, ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಬಿರುಗಾಳಿ ಮಳೆಗೆ ಜಿಲ್ಲೆಯಲ್ಲಿ ಹತ್ತು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 6 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಐದು ಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ದಾವಣಗೆರೆ ವರದಿ: ಜಿಲ್ಲೆಯ ಹರಿಹರ, ಜಗಳೂರು, ಚನ್ನಗಿರಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. 

ಮಳೆ ಬಿದ್ದಿರುವ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿ ಹಸನು ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.