ADVERTISEMENT

‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಆರಂಭ; 72 ಗಂಟೆಗಳೊಳಗೆ ಸಾಮಾಜಿಕ ಪಿಂಚಣಿ ಆದೇಶ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:08 IST
Last Updated 14 ಮೇ 2022, 2:08 IST
   

ಬೆಂಗಳೂರು: ಅರ್ಹ ಫಲಾನುಭವಿಗಳಿಗೆ 72 ಗಂಟೆಗಳೊಳಗೆ ಸಾಮಾಜಿಕ ಪಿಂಚಣಿ ಆದೇಶ ತಲುಪಿಸುವುದಕ್ಕಾಗಿ ಕಂದಾಯ ಇಲಾಖೆ ರೂಪಿಸಿರುವ ‘ಹಲೋ ಕಂದಾಯ ಸಚಿವರೇ’ (ಟೋಲ್‌ ಫ್ರೀ ಸಂಖ್ಯೆ– 155245) ಸಹಾಯವಾಣಿಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ– 155245ಗೆ ಕರೆ ಮಾಡುತ್ತಿದ್ದಂತೆಯೇ ಸಹಾಯವಾಣಿ ಕೇಂದ್ರದಲ್ಲಿರುವ ಸಿಬ್ಬಂದಿ ಅವರ ಆಧಾರ್‌ ಸಂಖ್ಯೆ, ವಿಳಾಸ, ವಯಸ್ಸು, ಯಾವ ವಿಭಾಗದಡಿ ಸಾಮಾಜಿಕ ಪಿಂಚಣಿ ಕೋರುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆಯುತ್ತಾರೆ. ಅದನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಂತೆಯೇ ಮಾಹಿತಿ ಸಮೇತ ಅರ್ಜಿಯು ಸಂಬಂಧಿಸಿದ ಗ್ರಾಮ ಲೆಕ್ಕಿಗರ ಮೊಬೈಲ್‌ ಸಂಖ್ಯೆಗೆ ರವಾನೆಯಾಗುತ್ತದೆ. ಗ್ರಾಮಲೆಕ್ಕಿಗರು ಅರ್ಜಿದಾರರ ಮನೆಗೆ ತೆರಳಿ ಅಗತ್ಯ ದಾಖಲೆ ಪಡೆದು, ಅರ್ಹರಿರುವವರಿಗೆ ಮೂರು ದಿನಗಳೊಳಗೆ ಆದೇಶದ ಪ್ರತಿ ನೀಡಬೇಕು.

ಬಾಗಲಕೋಟೆ ಜಿಲ್ಲೆಯ ಹುನಗುಂದ ಗ್ರಾಮದ ದೀಪಾ ಎಂಬುವವರ ಕರೆಯನ್ನು ವೇದಿಕೆಯಲ್ಲೇ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ, ಅಗತ್ಯ ವಿವರಗಳನ್ನು ಪಡೆದುಕೊಂಡರು. ಬಳಿಕ ಮಾಹಿತಿಯನ್ನು ಸಂಬಂಧಿಸಿದ ಗ್ರಾಮಲೆಕ್ಕಿಗರಿಗೆ ರವಾನಿಸಲಾಯಿತು.

ADVERTISEMENT

‘ಪ್ರತಿ ವರ್ಷ ರಾಜ್ಯ ಸರ್ಕಾರ ಸಾಮಾಜಿಕ ಪಿಂಚಣಿ ಯೋಜನೆಗಳ ಅಡಿಯಲ್ಲಿ ₹ 10,000 ಕೋಟಿ ವೆಚ್ಚ ಮಾಡುತ್ತಿದೆ. 72 ಲಕ್ಷಕ್ಕೂ ಹೆಚ್ಚು ಜನರು ಪಿಂಚಣಿ ಪಡೆಯುತ್ತಿದ್ದಾರೆ. ಆಡಳಿತವೇ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಬೇಕು ಎಂಬ ಮುಖ್ಯಮಂತ್ರಿಯವರ ಆಶಯದಂತೆ ಸಹಾಯವಾಣಿ ಆರಂಭಿಸಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಮುಂದಿನ ದಿನಗಳಲ್ಲಿ ಸಾಮಾಜಿಕ ಪಿಂಚಣಿ ಪಡೆಯಲು ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಮಧ್ಯವರ್ತಿಗಳ ಬಳಿಯೂ ಹೋಗಬೇಕಿಲ್ಲ. ಸಹಾಯವಾಣಿಗೆ ಕರೆಮಾಡಿದರೆ ಸಾಕು. ಸರ್ಕಾರವೇ ಜನರ ಬಳಿ ಹೋಗಿ ಸೌಲಭ್ಯ ವಿತರಿಸುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.