ADVERTISEMENT

ಸವಾರರಿಗೆ ಹೆಲ್ಮೆಟ್ ದಾನ ಮಾಡಿದರು

ಕೂಲಿ ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸುವ ಶಿವರಾಮು

ಈರಪ್ಪ ಹಳಕಟ್ಟಿ
Published 3 ನವೆಂಬರ್ 2018, 20:15 IST
Last Updated 3 ನವೆಂಬರ್ 2018, 20:15 IST
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಶಿವರಾಮು ಅವರು (ನೀಲಿ ಪಂಚೆ ತೊಟ್ಟವರು) ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ನೀಡಿದರು.
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಶಿವರಾಮು ಅವರು (ನೀಲಿ ಪಂಚೆ ತೊಟ್ಟವರು) ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ನೀಡಿದರು.   

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ಹೆಲ್ಮೆಟ್‌ ಧರಿಸದೆ ಬೈಕ್ ಏರಿ ಹೊರಟಿದ್ದ ಸವಾರರು ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ಪೊಲೀಸರ ದಂಡು ಕಂಡು ಕಕ್ಕಾಬಿಕ್ಕಿಯಾದರು. ಸೋತ ಮೋರೆಯಲ್ಲಿ ದಂಡ ಕಟ್ಟಿದವರ ತಲೆಗೆ ಪೊಲೀಸರು ಹೊಸ ಹೆಲ್ಮೆಟ್ ಹಾಕಿ ಬೆನ್ನು ತಟ್ಟಿ ಕಳುಹಿಸುತ್ತಿದ್ದಂತೆ ಏನೊಂದು ಅರ್ಥವಾಗದೆ ಮೂಕವಿಸ್ಮಿತರಾದರು.

ಕೇಳಲು ತುಸು ಆಶ್ಚರ್ಯವೆನಿಸಬಹುದು. ಆದರೆ ಉಚಿತವಾಗಿ ಹೊಸ ಹೆಲ್ಮೆಟ್‌ ನೀಡಿದವರು ಪೊಲೀಸರಲ್ಲ, ಹೊಟೇಲ್‌ಗಳಲ್ಲಿ ಬಾಣಸಿಗರಾಗಿ ಕೆಲಸ ಮಾಡುವ ನಗರದ ನಿವಾಸಿ ಶಿವರಾಮು.

ನಗರದ ಎಂ.ಜಿ.ರಸ್ತೆಯಲ್ಲಿ ಪತ್ನಿ ಮತ್ತು ಮಗನಿಗೆ ಪ್ರತ್ಯೇಕ ಹೊಟೇಲ್‌ಗಳನ್ನು ಹಾಕಿಕೊಟ್ಟಿರುವ ಶಿವರಾಮು ಅವರು ಆ ಎರಡೂ ಹೊಟೇಲ್‌ಗಳಲ್ಲಿ ಅಡುಗೆ ಕೆಲಸ ಮಾಡಿ, ಕೂಲಿ ಪಡೆದು ಅದನ್ನು ಇಂತಹ ಸಮಾಜಮುಖಿ ಕೆಲಸಗಳಿಗೆ ಬಳಸುತ್ತಿದ್ದಾರೆ.

ADVERTISEMENT

ನಗರದಲ್ಲಿ ಶನಿವಾರ ಒಂದೇ ದಿನ ಅವರು ತಲಾ ₹400 ಬೆಲೆ ಬಾಳುವ ₹12 ಸಾವಿರ ಮೌಲ್ಯದ 30 ಹೆಲ್ಮೆಟ್‌ಗಳನ್ನು ಸಂಚಾರ ಪೊಲೀಸರ ಮೂಲಕ ಸವಾರರಿಗೆ ಉಚಿತವಾಗಿ ನೀಡಿ ಧನ್ಯತೆ ಮೆರೆದರು.

ಈ ಕುರಿತು ಶಿವರಾಮು ಅವರನ್ನು ವಿಚಾರಿಸಿದರೆ, ‘ಪೊಲೀಸರು ಎಷ್ಟೇ ಹೇಳಿದರೂ ಅನೇಕ ಸವಾರರು ದಂಡ ಕಟ್ಟುತ್ತಾರೆ ವಿನಾ ಹೆಲ್ಮೆಟ್ ಧರಿಸುವುದಿಲ್ಲ. ಇತ್ತೀಚೆಗೆ ನಗರದಲ್ಲಿ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಿಂದ ಯುವಕನೊಬ್ಬ ಯದ್ವಾತದ್ವಾ ಬೈಕ್ ಓಡಿಸಿ ಬಿದ್ದು ಗಾಯಗೊಂಡ. ಆ ದೃಶ್ಯ ನೋಡಿದ ಬಳಿಕ ಹೆಲ್ಮೆಟ್ ಕೊಟ್ಟರೆ ಒಬ್ಬರ ಪ್ರಾಣವಾದರೂ ಉಳಿಸಿದಂತಾಗುತ್ತದೆ ಎಂದು ಈ ತೀರ್ಮಾನಕ್ಕೆ ಬಂದೆ’ ಎಂದು ತಿಳಿಸಿದರು.

‘ನಾವು ಇನ್ನೊಬ್ಬರಿಗೆ ಆಸ್ತಿ, ಹಣ ಸೇರಿದಂತೆ ಏನನ್ನಾದರೂ ಕೊಡಬಹುದು. ಆದರೆ ನಮ್ಮಿಂದ ಮತ್ತೊಬ್ಬರಿಗೆ ಜೀವದಾನ ಮಾಡಲು ಸಾಧ್ಯವಿಲ್ಲ. ಆದರೆ ಇಂತಹ ಕೆಲಸಗಳ ಮೂಲಕ ಜೀವನ ಕೊಡಬಹುದು. ಆದ್ದರಿಂದ ಇನ್ನು ಕೆಲ ದಿನಗಳು ಬಿಟ್ಟು ಸುಮಾರು 50 ಹೆಲ್ಮೆಟ್‌ ಹಂಚಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.

ಕುಡಿಯುವ ಚಟ ಬಿಟ್ಟು ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಚೆನ್ನಾಗಿ ಬಾಳುವೆ ಎಂದು ಪ್ರಮಾಣ ಮಾಡುವ ಮದ್ಯವ್ಯಸನಿಗಳಿಗೆ ₹5 ಸಾವಿರ, ಜತೆಗೆ ಅವರ ಕುಟುಂಬಕ್ಕೆ ₹6 ಸಾವಿರದಂತೆ ಹೊಸ ಬದುಕು ಕಟ್ಟಿಕೊಳ್ಳಲು ₹11 ಸಾವಿರದಷ್ಟು ನೆರವು ನೀಡುವ ಶಿವರಾಮು ಅವರು ಬಡ ಕುಟುಂಬಗಳ ಅಂತ್ಯಕ್ರಿಯೆಗೆ ಸಹಾಯ ಮಾಡುತ್ತಾರೆ. ಅನಾಥ ಶವಗಳಿದ್ದರೆ ತಾವೇ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ದೇವಾಲಯಗಳ ಜೀರ್ಣೊದ್ಧಾರ ಕಾರ್ಯಗಳಿಗೆ ಧನಸಹಾಯ ಮಾಡುವುದನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.