ADVERTISEMENT

ನಿಂಬಾಳ್ಕರ್‌ ವಿರುದ್ಧದ ಇಲಾಖಾ ವಿಚಾರಣೆ ಕೈಬಿಟ್ಟ ಸರ್ಕಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 16:07 IST
Last Updated 1 ಆಗಸ್ಟ್ 2023, 16:07 IST
ಹೇಮಂತ್‌ ನಿಂಬಾಳ್ಕರ್‌
ಹೇಮಂತ್‌ ನಿಂಬಾಳ್ಕರ್‌   

ಬೆಂಗಳೂರು: ಐಎಂಎ (ಐ–ಮಾನಿಟರಿ ಅಡ್ವೈಸರಿ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ, ಸದ್ಯ ವಾರ್ತಾ ಇಲಾಖೆಯ ಆಯುಕ್ತರಾಗಿರುವ ಹೇಮಂತ್‌ ನಿಂಬಾಳ್ಕರ್‌ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ವರದಿ ಆಧರಿಸಿ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಮುಕ್ತಾಯಗೊಳಿಸಿದೆ.

ಹೇಮಂತ್‌ ನಿಂಬಾಳ್ಕರ್‌ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶರ ವರದಿಯಲ್ಲಿದೆ. ಹೀಗಾಗಿ, ಅವರ ಮೇಲಿನ ಎಲ್ಲ ಆರೋಪಗಳನ್ನು ಕೈಬಿಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ತನಿಖೆ ನಡೆಸಿದ್ದ ಸಿಬಿಐ, ಅಂದು ಅಪರಾಧ ತನಿಖಾ ದಳದ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಹೇಮಂತ್‌ ನಿಂಬಾಳ್ಕರ್‌ ವಿರುದ್ಧ  ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಿತ್ತು. ಎಐಎಸ್‌ (‌ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ನಿಂಬಾಳ್ಕರ್‌ ಅವರಿಗೆ ನೋಟಿಸ್‌ ನೀಡಲಾಗಿತ್ತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ್ದ ನಿಂಬಾಳ್ಕರ್‌, ತಮ್ಮ ಮೇಲಿನ ಕ್ರಿಮಿನಲ್‌ ಪ್ರಕ್ರಿಯೆಯನ್ನು ಹೈಕೋರ್ಟ್‌ ವಜಾಗೊಳಿಸಿರುವುದರಿಂದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು 2021ರ ಮೇ 18ರಂದು ಪತ್ರ ಬರೆದಿದ್ದರು. ಅದಕ್ಕೆ ರಾಜ್ಯ ಸರ್ಕಾರವು ಕ್ರಿಮಿನಲ್‌ ಪ್ರಕ್ರಿಯೆ ಮತ್ತು ಇಲಾಖಾ ವಿಚಾರಣೆ ವಿಭಿನ್ನ ತತ್ವದ ಮೇಲೆ ನಡೆಸಲಾಗುತ್ತದೆ. ಕ್ರಿಮಿನಲ್‌ ಪ್ರಕ್ರಿಯೆ ವಜಾ ಮಾಡಿರುವುದರಿಂದ ಇಲಾಖಾ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿತ್ತು. ಅಲ್ಲದೆ, ನಿಂಬಾಳ್ಕರ್‌ ಮತ್ತು ಇನ್ನೊಬ್ಬ ಐಪಿಎಸ್‌ ಅಧಿಕಾರಿ ಎಸ್‌. ಮುರುಗನ್‌ ವಿರುದ್ಧ ವಿಚಾರಣೆಗೆ ನಿವೃತ್ತ  ಜಿಲ್ಲಾ ನ್ಯಾಯಾಧೀಶ ಕೆ.ಎಂ. ತಿಮ್ಮಯ್ಯ ಅವರನ್ನು ನೇಮಿಸಿತ್ತು.

ವಿಚಾರಣಾಧಿಕಾರಿಯು ನಿಂಬಾಳ್ಕರ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ವರದಿ ನೀಡಿದ್ದರು. ಈ ವರದಿಯನ್ನು ಒಪ್ಪಿಕೊಂಡಿರುವ ಸರ್ಕಾರ, ಅವರನ್ನು ಆರೋಪಗಳಿಂದ ಮುಕ್ತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.