ಬೇಲೂರು (ಹಾಸನ ಜಿಲ್ಲೆ): ಹೇಮಾವತಿ, ಯಗಚಿ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯೂ ಅನ್ಯರ ಪಾಲು, ಬೆಂಗಳೂರು ಸೇರಿದಂತೆ ತಾಲ್ಲೂಕಿನ ಹೊರಗಿನ ನಿವಾಸಿಗಳಿಗೂ ಭೂಮಿ ಮಂಜೂರು, ಶೇ 99ರಷ್ಟು ಪ್ರಕರಣಗಳಲ್ಲಿ ಫಾರಂ 53ರ ಮೂಲ ಅರ್ಜಿಗಳೇ ಇಲ್ಲ.
– ತಾಲ್ಲೂಕಿನ ಬಗರ್ ಹುಕುಂ ಸಕ್ರಮ ಸಮಿತಿಯಲ್ಲಿ 2016ರಿಂದ 2022ರವರೆಗೆ ನಡೆದಿರುವ ಭೂ ಮಂಜೂರಾತಿಯ ಅಕ್ರಮಗಳಿವು.
ಸಕಲೇಶಪುರದ ಹಿಂದಿನ ಉಪ ವಿಭಾಗಾಧಿಕಾರಿ ಪ್ರತೀಕ್ ಭಾಯಲ್ ಅವರು ಆರು ವರ್ಷಗಳ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಈ ವಿಷಯಗಳು ಬಹಿರಂಗವಾಗಿವೆ.
ಕೆಲ ಪ್ರಕರಣಗಳಲ್ಲಿ ಅರ್ಹ ರೈತರ ಅರ್ಜಿಗಳನ್ನು ವಜಾಗೊಳಿಸಿ, ಬಲಿಷ್ಠರಿಗೆ ಭೂಮಿ ಮಂಜೂರು ಮಾಡಿರುವ ಬಗ್ಗೆ
ಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪಟ್ಟಣದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಮಂಜೂರು ಮಾಡುವಂತಿಲ್ಲ ಎಂಬ ನಿಯಮವನ್ನೂ ಉಲ್ಲಂಘಿಸಲಾಗಿದೆ. ಮಾಜಿ ಸೈನಿಕರಿಗೆ, ಹೇಮಾವತಿ, ಯಗಚಿ ಜಲಾಶಯ ಯೋಜನೆಯ ಮುಳುಗಡೆ ರೈತರಿಗೆ ಮೀಸಲಿಟ್ಟ ಭೂಮಿಯನ್ನೂ ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡಿರುವುದು ದೃಢಪಟ್ಟಿದೆ.
‘ಸಾಕ್ಷ್ಯ ನಾಶಕ್ಕಾಗಿ ದಾಖಲೆ ಪುಸ್ತಕಗಳಲ್ಲಿ ಕೆಲವು ಹಾಳೆಗಳನ್ನು ಹರಿದು ಹಾಕಿರುವುದು ಕಂಡುಬಂದಿದೆ. ಮಂಜೂರಾದ ಭೂಮಿಗೆ ತಹಶೀಲ್ದಾರ್ ಸ್ಥಳ ಪರಿಶೀಲನೆಯ ವರದಿ ಕಡತಗಳೇ ಇಲ್ಲ’.
‘ಹಿಂದಿನ ಬಗರ್‌ಹುಕುಂ ಸಮಿತಿ ಯಿಂದ ತಿರಸ್ಕೃತಗೊಂಡ ಅರ್ಜಿಗಳಿಗೂ ಭೂಮಿ ಮಂಜೂರು ಮಾಡಲಾಗಿದೆ. ಒಬ್ಬರಿಗೆ ಮಂಜೂರಾದ ಭೂಮಿಯ ಮೇಲೆ, ಮತ್ತೊಬ್ಬರ ಮಂಜೂರಾತಿ ನಕ್ಷೆ ತಯಾರು ಮಾಡಲಾಗಿದೆ’ ಎಂಬುದು ವರದಿಯಲ್ಲಿದೆ.
ತಾಲ್ಲೂಕಿನಲ್ಲಿ ಬಗರ್ ಹುಕುಂ ಸಕ್ರಮ ಸಮಿತಿಯಲ್ಲಿ 2016ರಿಂದ 2020ರವರೆಗೆ ಮಂಜೂರಾಗಿರುವ ಪ್ರಕರಣಗಳಲ್ಲಿ ನ್ಯೂನತೆಗಳು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ, ಪರಿಶೀಲಿಸುವಂತೆ 2020ರಲ್ಲಿ ಅಂದಿನ ತಹಶೀಲ್ದಾರ್ ಎನ್.ವಿ.ನಟೇಶ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಸಕಲೇಶಪುರ ಉಪ ವಿಭಾಗಾಧಿಕಾರಿಗೆ 2020ರಲ್ಲೇ ಸೂಚಿಸಿದ್ದರು. ಪ್ರತೀಕ್ ಭಾಯಲ್ 2016ರಿಂದ 2022ರವರೆಗೆ ಮಂಜೂರಾದ 1,430 ಕಡತಗಳನ್ನು ಪರಿಶೀಲಿಸಿದ್ದು, ನ್ಯೂನತೆಗಳ ಬಗ್ಗೆ ವರದಿಯಲ್ಲಿ ತಿಳಿಸಿದ್ದಾರೆ.
1,260 ಅರ್ಜಿದಾರರಿಗೆ ಖಾತೆ
‘ಮಂಜೂರಾದ 1,430 ಅರ್ಜಿದಾರರ ಪೈಕಿ 1,384 ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಿದ್ದು, 1,260 ಅರ್ಜಿದಾರರ ಹೆಸರಿಗೆ ಖಾತೆ ಮಾಡಲಾಗಿದೆ. 46 ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಬೇಕಿದೆ.
ಸಾಗುವಳಿ ಚೀಟಿ ನೀಡಿರುವ 1,384 ಅರ್ಜಿದಾರರ ಕಡತಗಳಲ್ಲಿ 1,260 ಅರ್ಜಿದಾರರ ಕಡತಗಳು ಅನುದಾನ ಪ್ರಕ್ರಿಯೆಯಲ್ಲಿ ಪ್ರಮುಖ ಲೋಪದೋಷ ಹೊಂದಿದ್ದು, ಅಕ್ರಮ ಮಂಜೂರಾತಿ ಹೊಂದಿವೆ. 124 ಅರ್ಜಿದಾರರ ಕಡತಗಳು ಅನುದಾನ ಪ್ರಕ್ರಿಯೆಯಲ್ಲಿ ಕಡಿಮೆ ಲೋಪದೋಷಗಳೊಂದಿಗೆ ಮಂಜೂರಾತಿ ಹೊಂದಿವೆ’ ಎಂಬುದನ್ನು ಪ್ರತೀಕ್ ಭಾಯಲ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರತೀಕ್ ವರ್ಗಾವಣೆ
ಬಗರ್ ಹುಕುಂ ಸಕ್ರಮ ಸಮಿತಿಯ ಅಕ್ರಮ ಭೂ ಮಂಜೂರಾತಿ ಕುರಿತು ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಭಾಯಲ್ ಅವರ ವರ್ಗಾವಣೆಯಾಗಿದೆ.
ಸ್ಥಳೀಯ ಶಾಸಕರೊಬ್ಬರ ಶಿಫಾರಸಿನಂತೆ ಮುಖ್ಯಮಂತ್ರಿ ಕಚೇರಿಯಿಂದಲೇ ವರ್ಗಾವಣೆಗೆ ಸೂಚನೆ ನೀಡಲಾಗಿದೆ. ಇದೀಗ ಅನಮೋಲ್ ಜೈನ್ ಅವರನ್ನು ಉಪ ವಿಭಾಗಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.