ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಬಿ.ವೈ.ವಿಜಯೇಂದ್ರ ಅವರನ್ನು ನಿಯೋಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಆದೇಶಿಸಿದ್ದಾರೆ.
ಎರಡನೇ ತಲೆಮಾರಿನ ನಾಯಕರಾಗಿ ಬಿಜೆಪಿಯಲ್ಲಿ ಮುಂಚೂಣಿಗೆ ಬಂದ ವಿಜಯೇಂದ್ರ ಅವರು ಇದೀಗ ದೊಡ್ಡ ಹುದ್ದೆ ಅಲಂಕರಿಸಿ ಬಿಜೆಪಿಯಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳಲು ವೇದಿಕೆ ತಯಾರು ಮಾಡಿಕೊಂಡಿದ್ದಾರೆ.
ಪದವೀಧರರಾಗಿರುವ 47 ವರ್ಷ ವಯಸ್ಸಿನ ವಿಜಯೇಂದ್ರ ಅವರು ಸಣ್ಣ ವಯಸ್ಸಿನಲ್ಲಿ ದೊಡ್ಡ ಹುದ್ದೆಗೆ ಏರಿದ್ದಾರೆ. ಶಾಸಕರಾಗುವ ಮೊದಲು ಬಿಜೆಪಿ ಯುವಮೋರ್ಚಾ ಸೇರಿದಂತೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರು.
ಬಿವೈ ವಿಜಯೇಂದ್ರ ನಡೆದು ಬಂದ ಹಾದಿ..
ಬೂಕನಕೆರೆ ಯಡಿಯೂರಪ್ಪ ವಿಜಯೇಂದ್ರ ಅವರು 1976ರಲ್ಲಿ ಶಿಕಾರಿಪುರದಲ್ಲಿ ಜನಿಸಿದರು.
ಬಿ.ವೈ.ವಿಜಯೇಂದ್ರ ಮೂರು ವರ್ಷಗಳ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಹೊಣೆ.
ನಂತರ 2020 ರಲ್ಲಿ ಕೆ.ಆರ್.ಪೇಟೆ, ಶಿರಾ ಉಪಚುನಾವಣೆ ಹೊಣೆ ಹೊತ್ತುಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದರು.
ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವಲ್ಲಿ ಪ್ರಮುಖ ಪಾತ್ರ
2023 ರಲ್ಲಿ ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ನಿವೃತ್ತಿಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ.
ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬ ಶ್ರೇಯ. ಹೀಗಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಮಹತ್ವದ ಜವಾಬ್ದಾರಿ.
ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವ ನಾಯಕರಾದ ವಿಜಯೇಂದ್ರ ಅವರು ಚುನಾವಣೆ ನಂತರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಇದರಿಂದಾಗಿ ಅವರ ನೇಮಕ ಕುರಿತ ದಟ್ಟ ವದಂತಿ ಹಬ್ಬಿತ್ತು.
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ನಾಯಕರಿಗೆ 2ನೇ ಬಾರಿ ರಾಜ್ಯಾಧ್ಯಕ್ಷ ಹುದ್ದೆ ಒಲಿದುಬಂದಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆಗ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.
ಅವರ ರಾಜಕೀಯ ನಿವೃತ್ತಿಯ ನಂತರ ತಮ್ಮ ಕ್ಷೇತ್ರವನ್ನು ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟರು. ಇದಾದ ಬೆನ್ನಲ್ಲೇ ಮಹತ್ವದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರಗೆ ಒಲಿದುಬಂದಿದೆ.
ಇದರಿಂದಾಗಿ ಶಿಕಾರಿಪುರ ಕ್ಷೇತ್ರ ಪ್ರತಿನಿಧಿಸುವವರು 2ನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಮೂಲಕ ಇತಿಹಾಸದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.