ಹೆಸರಘಟ್ಟ: ‘ದಾಸನಪುರ ಹೋಬಳಿ ಕುಕ್ಕನಹಳ್ಳಿ ಗ್ರಾಮದಲ್ಲಿರುವ ಕಾಂಗೋವಿ ಆಸಿಡ್ ತಯಾರಿಕೆ ಕಾರ್ಖಾನೆಯ ಮಾಲೀಕರು ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಕಾರ್ಯಕರ್ತರು ಕಾರ್ಖಾನೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಕೇಳಿದ ದಲಿತ ನೌಕರರ ಮೇಲೆ ಕಾರ್ಖಾನೆ ಮಾಲೀಕರಾದ ಶ್ರೀನಿವಾಸ್ ಮತ್ತು ಎಚ್.ವಿ. ಮೆನನ್ ಅವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ, ಆರೋಪಿಗಳನ್ನು ಬಂಧಿಸಿಲ್ಲ’ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಜಿ.ಮೌರ್ಯ ಆಕ್ರೋಶ ವ್ಯಕ್ತಪಡಿಸಿದರು.
‘ದಿನಕ್ಕೆ 8 ಗಂಟೆ ಮಾತ್ರ ದುಡಿಸಿಕೊಳ್ಳಬೇಕು ಎಂಬ ನಿಯಮ ಇದ್ದರೂ, 12 ಗಂಟೆ ದುಡಿಸಿಕೊಂಡು 8 ಗಂಟೆಯ ವೇತನ ನೀಡುತ್ತಿದ್ದಾರೆ. ವಾರದ ರಜೆ ನೀಡುತ್ತಿಲ್ಲ. ಒಂದು ದಿನ ಗೈರಾದರೆ ಸಂಬಳದಲ್ಲಿ ₹1,000 ಕಡಿತ ಮಾಡಿಕೊಳ್ಳಲಾಗುತ್ತಿದೆ’ ಎಂದು ದೂರಿದರು.
‘ಕೆಲ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಅವರಿಗೆ ಮತ್ತೆ ಕೆಲಸ ನೀಡುವ ತನಕ ಹೋರಾಟ ಮುಂದುವರಿಸಲಾಗುವುದು’ ಎಂದು ಪಕ್ಷದ ಜಿಲ್ಲಾಧ್ಯಕ್ಷಮಹೇಂದ್ರ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.