ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಶೇ 50ರ ಮಿತಿಯೇ ಸವಾಲು

ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ

ವಿಜಯಕುಮಾರ್ ಎಸ್.ಕೆ.
Published 15 ನವೆಂಬರ್ 2019, 22:40 IST
Last Updated 15 ನವೆಂಬರ್ 2019, 22:40 IST
ವಿಶ್ರಾಂತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ - PHOTO / IRSHAD MAHAMMAD
ವಿಶ್ರಾಂತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ - PHOTO / IRSHAD MAHAMMAD   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಸಮಗ್ರ ಅಧ್ಯಯನ ನಡೆಸುತ್ತಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗಕ್ಕೆ ಶೇ 50ರ ಮಿತಿಯೊಳಗೆ ಮೀಸಲಾತಿ ಹೆಚ್ಚಳ ಮಾಡುವುದು ಸವಾಲಾಗಿ ಪರಿಣಮಿಸಿದೆ. ಕಾನೂನು ತಜ್ಞರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚಿಂತಕರ ಅಭಿಪ್ರಾಯ ಸಂಗ್ರಹಿಸುತ್ತಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಂಗವಿಕಲರು, ಮಾಜಿ ಸೈನಿಕರು ಸೇರಿ ಇತರರಿಗೆ ಶೇ 50ರಷ್ಟು ಮೀಸಲಾತಿ ಹಂಚಿಕೆಯನ್ನು ರಾಜ್ಯ ಸರ್ಕಾರ ಈಗಾಗಲೇ ಮಾಡಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಪ್ರಮಾಣ ಹೆಚ್ಚಳವಾಗುವಂತಿಲ್ಲ. ಇದರ ಮಿತಿಯೊಳಗೆ ಪರಿಶಿಷ್ಟ ಜಾತಿಗೆ ಶೇ 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 4ರಷ್ಟು ಹೆಚ್ಚಳ ಮಾಡುವುದು ಹೇಗೆ ಎಂಬ ಜಿಜ್ಞಾಸೆ ಆಯೋಗವನ್ನು ಕಾಡುತ್ತಿದೆ.

1950ರಲ್ಲಿ ಮೀಸಲಾತಿ ಹಂಚಿಕೆಯಾಗಿದ್ದು, ಅದನ್ನೇ ಅನುಸರಿಸಿಕೊಂಡು ಮೀಸಲಾತಿ ನೀಡಲಾಗುತ್ತಿದೆ. ಕರ್ನಾಟಕ ಏಕೀಕರಣವಾದ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ, ಹಿಂದುಳಿದ ವರ್ಗಗಳಲ್ಲಿದ್ದ ಹಲವು ಜಾತಿಗಳು ಈ
ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಹೀಗಾಗಿ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಕೂಗು ದೊಡ್ಡದಾಗಿದೆ.

ADVERTISEMENT

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ಸರ್ಕಾರ ಆಯೋಗ ರಚನೆ ಮಾಡಿದೆ. ನ.4ರಿಂದ ಕಾರ್ಯಾರಂಭಗೊಂಡಿರುವ ಆಯೋಗ, ಸಾರ್ವಜನಿಕರು, ಸಂಘ–ಸಂಸ್ಥೆಗಳಿಂದ ಅಹವಾಲು ಸ್ವೀಕರಿಸುತ್ತಿದೆ.

‘ಸಂವಿಧಾನ ಮೀಸಲಾತಿ ಕಲ್ಪಿಸಿದೆಯೇ ಹೊರತು ಪ್ರಮಾಣ ಎಷ್ಟಿರಬೇಕು ಎಂದು ಹೇಳಿಲ್ಲ. ಆದರೆ, ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶೇ 50ರ ಮಿತಿ ದಾಟದಂತೆ ತಿಳಿಸಿದೆ. ರಾಜ್ಯದಲ್ಲಿ ಶೇ 50ರಷ್ಟು ಮೀಸಲಾತಿ ಜಾರಿಯಲ್ಲಿದೆ. ಯಾರ ಬುಟ್ಟಿಗೆ ಕೈಹಾಕಿದರೂ ವಿವಾದ ಹುಟ್ಟುಹಾಕಿದಂತೆ ಆಗಲಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮಾರ್ಗೋಪಾಯ ಹುಡುಕುವ ವಿಶ್ವಾಸವಿದೆ’ ಎಂದು ನ್ಯಾಯಮೂರ್ತಿ ನಾಗಮೋಹನದಾಸ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.‌

‘ಕಾನೂನು ಅಡಚಣೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಗುರುಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚಿಂತಕರ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗುತ್ತಿದೆ’ ಎಂದರು.

‘ರಾಜಕೀಯದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಹಂಚಿಕೆ ಕೂಡ ಆಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳವಾಗಬೇಕು ಎಂಬ ಅಭಿಪ್ರಾಯ ಈ ಸಮುದಾಯಗಳಲ್ಲಿದೆ. ಒಳ ಮೀಸಲಾತಿ ಮತ್ತು ಖಾಸಗಿ ಕ್ಷೇತ್ರ
ದಲ್ಲಿ ಮೀಸಲಾತಿಯನ್ನೂ ಕೇಳಿ ಅರ್ಜಿಗಳು ಬರುತ್ತಿವೆ’ ಎಂದು ಹೇಳಿದರು.

‘ಜನಸಂಖ್ಯೆ ಹೆಚ್ಚಳವಾಗಿರುವುದು ಒಂದು ಅಂಶ. ಅದನ್ನು ಹೊರತಾಗಿ ಮಾನವ ಅಭಿವೃದ್ಧಿ, ಆ ಸಮುದಾಯದ ಮಹಿಳೆಯರ ಸ್ಥಿತಿಗತಿಯನ್ನೂ ಅವಲೋಕಿಸಲಾಗುತ್ತಿದೆ. ಹಾವನೂರು, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ, ದ್ವಾರಕನಾಥ್‌, ರವಿವರ್ಮಕುಮಾರ್ ವರದಿ
ಗಳನ್ನು ತರಿಸಿಕೊಂಡು ಅಧ್ಯಯನ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

‘ಎಲ್ಲವನ್ನೂ ಒಟ್ಟುಗೂಡಿಸಿ ವಿಶ್ಲೇಷಣೆ ಮಾಡಿ ನಮ್ಮ ಅಭಿಪ್ರಾಯವನ್ನು ಕಾನೂನಿನ ಚೌಕಟ್ಟಿಗೆ ತರಬೇಕಾಗಿದೆ. ಸರ್ಕಾರ ನೀಡಿರುವ ಎರಡು ತಿಂಗಳ ಅವಧಿಯಲ್ಲಿ ಜವಾಬ್ದಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.

ವಿಭಾಗ ಮಟ್ಟದಲ್ಲಿ ಅಹವಾಲು ಸ್ವೀಕಾರ‌
ರಾಜಧಾನಿಯಲ್ಲಿ ಮಾತ್ರವಲ್ಲದೇ ಕಂದಾಯ ವಿಭಾಗ ಮಟ್ಟದಲ್ಲೂ ಜನರ ಅಹವಾಲು ಸ್ವೀಕರಿಸಲಾಗುವುದು. ಡಿಸೆಂಬರ್ 10 ರಿಂದ ಈ ಕಾರ್ಯ ಆರಂಭಿಸಲಾಗುವುದು ಎಂದು ನಾಗಮೋಹನದಾಸ್ ಹೇಳಿದರು.

‘ಎಲ್ಲಾ ಜಿಲ್ಲೆಗಳಿಗೂ ತೆರಳಲು ಸಮಯ ಇಲ್ಲ. ಹೀಗಾಗಿ ಮೈಸೂರು, ಬೆಳಗಾವಿ, ಕಲಬುರ್ಗಿ, ಬೆಂಗಳೂರಿನಲ್ಲಿ ಅಹವಾಲು ಸ್ವೀಕರಿಸಲಾಗುವುದು. ಆಯಾ ವಿಭಾಗದವರು ಅಲ್ಲಿಗೆ ಬಂದು ಅಹವಾಲು ನೀಡಬಹುದು. ಮೀಸಲಾತಿ ಬೇಕೆನ್ನುವವರು ಮಾತ್ರವಲ್ಲ ಯಾರೇ ಅರ್ಜಿ ಸಲ್ಲಿಸಿದರೂ ಸ್ವೀಕರಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.