ಬೆಂಗಳೂರು: ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಕೆಲವೇ ಗಂಟೆಗಳೊಳಗೆ ಮಾಹಿತಿ ನೀಡಲು ಸಾಮರ್ಥ್ಯ ಇರುವ ದೂರಸಂವೇದಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದರು.
ಕಾಳ್ಗಿಚ್ಚು ತಡೆ–ನಿಯಂತ್ರಣ ಸಿದ್ಧತೆ ಕುರಿತು ನಗರದ ಅರಣ್ಯ ಭವನದಲ್ಲಿ ಸೋಮವಾರ ಹಿರಿಯ ಅಧಿಕಾರ ಜತೆ ಸಭೆ ನಡೆಸಿ ಅವರು ಮಾತನಾಡಿದರು.
ಕಾಳ್ಗಿಚ್ಚಿನ ಕುರಿತು ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಖಂಡ್ರೆ, ‘ಅರಣ್ಯ ಇಲಾಖೆಯ ಅಗ್ನಿನಿಗ್ರಹ ಕೋಶದಿಂದ ಸತತ ನಿಗಾ ಇಡಬೇಕು’ ಎಂದೂ ಸೂಚಿಸಿದರು.
ರಾಜ್ಯದ ಕೆಲವು ಅರಣ್ಯಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಪದೇ ಪದೇ ಕಾಳ್ಗಿಚ್ಚು ಸಂಭವಿಸುತ್ತಿದೆ. 15 ವರ್ಷಗಳ ದತ್ತಾಂಶ ಆಧಾರದಲ್ಲಿ, ಇಂತಹ ಪ್ರದೇಶಗಳನ್ನು ‘ಹಾಟ್‌ಸ್ಪಾಟ್’ಗಳೆಂದು ಗುರುತಿಸಲಾಗಿದೆ ಎಂಬ ಮಾಹಿತಿ ಪಡೆದ ಸಚಿವರು, ‘ಈ ಪ್ರದೇಶಗಳಲ್ಲಿ ಹೆಚ್ಚಿನ ಅಗ್ನಿವೀಕ್ಷಕರನ್ನು ನಿಯೋಜಿಸಬೇಕು ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಬೇಕು’ ಎಂದು ಹೇಳಿದರು.
ದೂರಸಂವೇದಿ ಉಪಗ್ರಹಗಳ ಮೂಲಕ ಬಹಳ ವರ್ಷಗಳಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಈ ಹಿಂದೆ ನಾಸಾದಿಂದ ಕಾಳ್ಗಿಚ್ಚಿನ ಮಾಹಿತಿ ಇಸ್ರೊ ರಾಷ್ಟ್ರೀಯ ದೂರಸಂವೇದಿ ಕೇಂದ್ರಕ್ಕೆ ಬರುತ್ತಿತ್ತು. ಆ ಬಳಿಕವೇ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ಬರುತ್ತಿತ್ತು. ಈಗ ನೇರವಾಗಿ ನಾಸಾದಿಂದ ಇಸ್ರೊ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಬಂದು ಅಲ್ಲಿಂದ ಕರ್ನಾಟಕ ದೂರಸಂವೇದಿ ಸಂಸ್ಥೆಗೆ ಬರುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.