ಬೆಂಗಳೂರು: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಕ್ಷದ ನೀತಿ ನಿರೂಪಣೆಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಬಹಿರಂಗ ಹೇಳಿಕೆ ನೀಡಬಾರದು. ಹಾಗೆ ಮಾಡುವುದು ಸರಿಯಲ್ಲ’ ಎಂದರು.
ಇದೇ ವಿಷಯವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ‘ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಪಕ್ಷದ ವರಿಷ್ಠರು. ಅವರ ನಿರ್ಧಾರವನ್ನು ಗೌರವಿಸಬೇಕು. ವಿರೋಧ ಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಲುವಾಗಿ ನಾವೆಲ್ಲರೂ ಒಟ್ಟಾಗಿ ಇರಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಒಟ್ಟಾಗಿ ಕೂತು ಚರ್ಚಿಸಿ, ಪರಿಹರಿಸಿಕೊಳ್ಳಬೇಕು. ಬಹಿರಂಗವಾಗಿ ಈ ಬಗ್ಗೆ ಮಾತನಾಡಬಾರದು’ ಎಂದರು.
ಪಕ್ಷದ ನಾಯಕತ್ವದ ಬಗ್ಗೆ ಯತ್ನಾಳ ಅವರು ಈಚೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ತಮ್ಮ ಆಪ್ತರ ಜತೆಗೆ ಸಭೆ ನಡೆಸಿದ್ದರು. ಜತೆಗೆ, ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್–ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.