ADVERTISEMENT

ಮತಗಟ್ಟೆ ಅಧಿಕಾರಿ ಸಾವು: ಪರಿಹಾರ ಕೋರಿ ಪಿಐಎಲ್

​ಪ್ರಜಾವಾಣಿ ವಾರ್ತೆ
Published 19 ಮೇ 2021, 16:24 IST
Last Updated 19 ಮೇ 2021, 16:24 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಚುನಾವಣೆ ಕರ್ತವ್ಯಕ್ಕೆ ಹಾಜರಾಗಿ ಕೋವಿಡ್ ಸೋಂಕು ತಗುಲಿ ಮೃತಪಟ್ಟ ಮತಗಟ್ಟೆ ಅಧಿಕಾರಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಲುಹೈಕೋರ್ಟ್‌ ಆದೇಶಿಸಿದೆ.

ಬೀದರ್‌ನ ಹೋರಾಟಗಾರ ಅಂಬ್ರೇಶ್ ಕೆಂಚಾ ಅವರು ಅರ್ಜಿ ಸಲ್ಲಿಸಿದ್ದು, ‘ಕೋವಿಡ್‌ಗೆ ಬಲಿಯಾದ ಮತಗಟ್ಟೆ ಅಧಿಕಾರಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಮತ್ತು ಕುಟುಂಬದ ಸದಸ್ಯರಿಗೆ ಸರ್ಕಾರ ಉದ್ಯೋಗ ನೀಡಬೇಕು’ ಎಂದು ಕೋರಿದ್ದಾರೆ.

‘ವಿಧಾನಸಭೆ, ಲೋಕಸಭೆ ಉಪಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 57 ಬೋಧನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ’ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ್ದಾರೆ.

ADVERTISEMENT

‘ಚುನಾವಣೆಯಲ್ಲಿ ಮತದಾರರು ಕೋವಿಡ್ ಕಾರಣಕ್ಕೆ ಮತದಾನಕ್ಕೆ ಹಿಂಜರಿಯಬಹುದು. ಆದರೆ, ಸಿಬ್ಬಂದಿ ತಮ್ಮ ಕರ್ತವ್ಯದಿಂದ ದೂರ ಉಳಿಯಲು ಆಗುವುದಿಲ್ಲ. ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಧರಿಸುತ್ತಾರೆ. ಮತದಾನ ಸಿಬ್ಬಂದಿ ಮಾಸ್ಕ್ ಮತ್ತು ಕೈಗವಸುಗಳನ್ನು ಮಾತ್ರ ಧರಿಸಿದ್ದರು. ಹೀಗಾಗಿ, ಅಪಾಯಕ್ಕೆ ಸಿಲುಕಿದ್ದಾರೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಮೃತಪಟ್ಟವರ ಕುಟುಂಬಗಳಿಗೆ ₹30 ಲಕ್ಷ ಪರಿಹಾರ ನೀಡಬೇಕು. ಆಸ್ಪತ್ರೆಗೆ ಪಾವತಿಸಿರುವ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ವಿಚಾರಣೆಯನ್ನು ಪೀಠ ಜೂ.21ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.