ADVERTISEMENT

ಮಾಸ್ಕ್, ಸ್ಯಾನಿಟೈಸರ್ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ

ಹೈಕೋರ್ಟ್‌ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಅಫಿಡವಿಟ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 16:01 IST
Last Updated 21 ಆಗಸ್ಟ್ 2020, 16:01 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಎನ್–95 ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಸಮರ್ಥಿಸಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಹೇರಳವಾಗಿ ಉತ್ಪಾದನೆ ಆಗುತ್ತಿವೆ ಎಂದು ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಇವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾರಣ ಕೇಳಿತ್ತು.

‘ಸರ್ಜಿಕಲ್ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ಮಾ.31ರಂದು ಆದೇಶ ಹೊರಡಿಸಲಾಗಿತ್ತು.ಕಾಳಸಂತೆಯಲ್ಲಿ ಇವುಗಳ ಮಾರಾಟ ಮತ್ತು ದರ ಏರಿಕೆ ತಡೆಯುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಜೂ.31ರವರೆಗೆ ಕೈಗೊಂಡ ಕ್ರಮ ಇದಾಗಿತ್ತು. ಮಾಸ್ಕ್ ತಯಾರಿಸುವ 81 ಕಂಪನಿಗಳು ವರ್ಷಕ್ಕೆ 295 ಕೋಟಿಯಷ್ಟು ಉತ್ಪಾದನೆ ಮಾಡುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಂಡಿವೆ. ಎನ್‌–95 ಮಾಸ್ಕ್ ಉತ್ಪಾದನೆ ಮಾಡಲು 225 ಹೊಸ ಕಂಪನಿಗಳು ಅನುಮತಿ ಕೋರಿವೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಅಫಿಡವಿಟ್‌ನಲ್ಲಿ ತಿಳಿಸಿದೆ.

ADVERTISEMENT

‘ಸಕ್ಕರೆ ಕಾರ್ಖಾನೆಗಳಲ್ಲಿ ಸ್ಯಾನಿಟೈಸರ್ ತಯಾರಿಸುವ ವ್ಯವಸ್ಥೆ ಮಾಡಲಾಗಿದೆ. 900ಕ್ಕೂ ಹೆಚ್ಚು ಹೊಸ ಕಂಪನಿಗಳಿಗೆ ಪರವಾನಗಿಗಳನ್ನು ನೀಡಲಾಗಿದೆ’ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.