ADVERTISEMENT

ಶಿರೂರು ಶ್ರೀ ಸಾವಿನ ಪ್ರಕರಣ: ಮಾಧ್ಯಮ ಪ್ರಸಾರ ತಡೆಗೆ ಹೈಕೋರ್ಟ್‌ ನಕಾರ

ಲಕ್ಷ್ಮೀವರ ಸ್ವಾಮೀಜಿ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 17:13 IST
Last Updated 30 ಜುಲೈ 2018, 17:13 IST
   

ಬೆಂಗಳೂರು: ಉಡುಪಿಯ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಸುದ್ದಿ ಪ್ರಸಾರಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

‘ಆಧಾರ ರಹಿತ ಹಾಗೂ ಅವಹೇಳನಕಾರಿ ಸುದ್ದಿ ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿ ‘ಉಡುಪಿ ಅಷ್ಟಮಠ ಹಿತರಕ್ಷಣಾ ಸಮಿತಿ’ ಅಧ್ಯಕ್ಷ ಎಚ್.ವಿ.ಗೌತಮ ಮತ್ತು ಧಾರ್ಮಿಕ ಚಿಂತಕ ಬಿ.ರಾಮಚಂದ್ರ ಉಪಾಧ್ಯಾಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪರ್ಯಾಯ ತನಿಖೆ ನಡೆಸಿ ಶಿಕ್ಷೆಯನ್ನೂ ಘೋಷಿಸುತ್ತಿವೆ, ಶಿಕ್ಷೆಯ ಅನುಷ್ಠಾನವೊಂದೇ ಬಾಕಿ ಉಳಿದಿದೆ ಎಂಬಂತೆ ಹದ್ದುಮೀರಿ ವರ್ತಿಸುತ್ತಿವೆ. ಆದ್ದರಿಂದ ಸ್ವಾಮೀಜಿ ಸಾವಿಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರಕ್ಕೆ ಮಧ್ಯಂತರ ತಡೆ ನೀಡಬೇಕು’ ಎಂದು ಕೋರಿದರು.

ADVERTISEMENT

ಪ್ರತಿವಾದಿಗಳಾದ ಖಾಸಗಿ ಟಿ.ವಿ.ಚಾನೆಲ್‌ಗಳು, ವಾರ ಪತ್ರಿಕೆಗಳು, ಕನ್ನಡ–ಇಂಗ್ಲಿಷ್‌ ದಿನಪತ್ರಿಕೆಗಳು, ಅಂತರ್ಜಾಲ ಸುದ್ದಿ ತಾಣಗಳ ಸಂಪಾದಕರು ಹಾಗೂ ರಾಜ್ಯ ಗೃಹ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ವಿಚಾರಣೆಯನ್ನು ಆಗಸ್ಟ್ 2ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಂ.ಅರುಣ ಶ್ಯಾಮ್‌ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.