ADVERTISEMENT

ಸುಗುಣೇಂದ್ರ ತೀರ್ಥರ ಪರ್ಯಾಯಕ್ಕೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 16:00 IST
Last Updated 8 ಜನವರಿ 2024, 16:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಉಡುಪಿ ಅಷ್ಟ ಮಠದ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳದಂತೆ ಪುತ್ತಿಗೆ ಮಠದ ಪೀಠಾಧಿಪತಿ ಸುಗುಣೇಂದ್ರ ತೀರ್ಥ ಅವರನ್ನು ತಡೆಯಬೇಕು’ ಎಂಬ ಮನವಿಯನ್ನು ಹೈಕೋರ್ಟ್‌ ಸಾರಾಸಗಟಾಗಿ ತಳ್ಳಿ ಹಾಕಿದೆ.

‘ಉಡುಪಿ ಅಷ್ಟ ಮಠದ ಪರ್ಯಾಯ ಮಹೋತ್ಸವ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈ–ಲಾ ರೂಪಿಸಲು ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’  ಎಂದು ಕೋರಿ ಸೋದೆ ಮತ್ತು ಕೃಷ್ಣಾಪುರ ಮಠದ ಭಕ್ತರೂ ಆದ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ನ ಕುಳಾಯಿ ಹೊಸಬೆಟ್ಟು ಗ್ರಾಮದ ಗುರುರಾಜ ಜೀವನ ರಾವ್ ಸಲ್ಲಿಸಿದ್ದ ಅರ್ಜಿಯಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿ, ವಜಾಗೊಳಿಸಿದ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಜ್ಞಾನ ಸಂಪಾದನೆ ಹಾಗೂ ಪ್ರಸಾರಕ್ಕೆ ವಿದೇಶ ಪ್ರಯಾಣ ಬೆಳೆಸಿದರೆ ಅಥವಾ ಸಮುದ್ರೋಲ್ಲಂಘನ ಮಾಡಿದರೆ ತಪ್ಪೇನು’ ಎಂದು ಪ್ರಶ್ನಿಸಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಇದೇ 8ರಿಂದ 18ರವರೆಗೆ ನಡೆಯಲಿರುವ ಅಷ್ಟ ಮಠದ ಪರ್ಯಾಯದಲ್ಲಿ ಪುತ್ತಿಗೆ ಮಠದ ಪೀಠಾಧಿಪತಿ ಸುಗಣೇಂದ್ರ ತೀರ್ಥರು ಪಾಲ್ಗೊಳ್ಳುವುದಕ್ಕೆ ನಿರ್ಬಂಧ ವಿಧಿಸಬೇಕು. ಪರ್ಯಾಯ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈ–ಲಾ ರೂಪಿಸಲು ಸಮಿತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ಜ್ಞಾನದ ಪ್ರಸಾರ ಮಾಡಿಲ್ಲವೇ? ಸಾಮ್ರಾಟ್ ಅಶೋಕ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯನ್ನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ವಿದೇಶಕ್ಕೆ ಕಳುಹಿಸಲಿಲ್ಲವೇ? ಇಷ್ಟೆಲ್ಲಾ ಇತಿಹಾಸ ಇರುವಾಗ ನೀವ್ಯಾಕೆ ಇನ್ನೂ 18ನೇ ಶತಮಾನದ ಮಾತುಗಳನ್ನಾಡುತ್ತಿದ್ದೀರಿ.ಈ ವಿಚಾರದಲ್ಲಿ ನಿರ್ಬಂಧ ವಿಧಿಸುವುದಕ್ಕಾದರೂ ಅವಕಾಶ ಎಲ್ಲಿದೆ’ ಎಂದು ಪ್ರಶ್ನಿಸಿತು.

ಪ್ರಕರಣವೇನು?: ‘ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥರು 1997ರಲ್ಲಿ ಸಾಗರವನ್ನು ದಾಟಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಆದ್ದರಿಂದ, ಅವರು ಶ್ರೀ ಕೃಷ್ಣನನ್ನು ಸ್ಪರ್ಷಿಸಲು ಮತ್ತು ಪೂಜಿಸಲು ಅರ್ಹರಲ್ಲ. ಅವರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗಲೂ ಅವಕಾಶವಿಲ್ಲ‘ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಜ್ಞಾನ ಸಂಪಾದನೆಗಾಗಿ ವಿದೇಶಕ್ಕೆ ಹೋಗಿರಲಿಲ್ಲವೇ? ನಾವೀಗ 21ನೇ ಶತಮಾನದಲ್ಲಿದ್ದೇವೆ.
ಪಿ.ಬಿ.ವರಾಳೆ, ಮುಖ್ಯ ನ್ಯಾಯಮೂರ್ತಿ

ಆಗು ನಿ ಅನಿಕೇತನ...

‘ಧರ್ಮ-ಶಾಸ್ತ್ರದ ವಿಚಾರದಲ್ಲಿ ಹೀಗೆಯೇ ಮಾಡಬೇಕು ಇದೇ ರೀತಿಯಲ್ಲೇ ನಡೆದುಕೊಳ್ಳಬೇಕು ಅದನ್ನು ಮುಟ್ಟಬಾರದು ಇದನ್ನು ಸೇವಿಸಬಾರದು ಎಂಬುದನ್ನೆಲ್ಲಾ ನ್ಯಾಯಾಲಯ ಹೇಳಬೇಕು ಎಂಬುದು ಎಷ್ಟು ಸರಿ‘ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಪ್ರಶ್ನಿಸಿದರು.

ರಾಷ್ಟ್ರಕವಿ ಕುವೆಂಪು ಅವರು ಜನಜನಿತ ಕವಿತೆಯನ್ನು ಸ್ಮರಿಸಿದ ನ್ಯಾಯಮೂರ್ತಿಗಳು ‘ಓ ನನ್ನ ಚೇತನ.... ಆಗು ನಿ ಅನಿಕೇತನ’ ಎಂಬುದನ್ನು ನಾವು ಇಂತಹ ಸಂದರ್ಭದಲ್ಲಿ ಸ್ಮರಿಸಬೇಕಿದೆ. ನಿಕೇತನ ಎಂದರೆ ಮನೆ ಅನಿಕೇತನ ಎಂದಾಗ ಮನೆಯಿಂದ ಆಚೆ ಬಂದು ನೋಡಬೇಕು ಎಂದರ್ಥ‘ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿ ಹೇಳಿದರು.

‘ಸ್ವಾಮೀಜಿ ವಿದೇಕ್ಕೆ ಪ್ರಯಾಣ ಬೆಳೆಸಿದ್ದರು ಎಂದರೆ ಈ ವಿಚಾರದಲ್ಲಿ ನ್ಯಾಯಾಲಯ ಏನು ಮಾಡಬೇಕು? ಇಂತಹ ಗೊಂದಲ ಎರಡನೇ ಬಾರಿಗೆ ಉದ್ಭವಿಸಿದೆ. ಯಾವುದಕ್ಕೂ ಒಂದು ಮಿತಿ ಇರುತ್ತದೆ. ಮುಕ್ತ ಮನಸ್ಸು ಮತ್ತು ಮುಕ್ತ ಆಲೋಚನೆಗಳಿರಬೇಕು. ಸಮುದ್ರೋಲ್ಲಂಘನ ಮಾಡಿದವರು ಅಷ್ಟ ಮಠಗಳ ಪೀಠಾಧಿಪತಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಅಂತಹವರು ಶ್ರೀ ಕೃಷ್ಣನ ಮೂರ್ತಿ ಸ್ಪರ್ಶ ಮಾಡುವುದಕ್ಕೆ ಹಾಗೂ ಪೂಜೆ ಮಾಡುವುದು ಸಲ್ಲ ಎಂದರೆ ಹೇಗೆ..?‘ ಎಂದು ಸೂಕ್ಷ್ಮವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.