ADVERTISEMENT

ಮಧ್ಯವರ್ತಿ ಲೋಕನಾಥ್‌ ಸಿಂಗ್‌ಗೆ ಹೈಕೋರ್ಟ್‌ ಜಾಮೀನು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಉದ್ಯಮಿಯಿಂದ ಜಪ್ತಿ ಮಾಡಿದ್ದ ₹ 75 ಲಕ್ಷ ಹಣವನ್ನು ದೋಚಲು ಬಿಡದಿ ಠಾಣೆಯ ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌ ಪ್ರಯತ್ನಿಸಿದ್ದಾರೆ‘ ಎನ್ನಲಾದ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಮಧ್ಯವರ್ತಿ ಎನ್‌.ಎಸ್‌.ಲೋಕನಾಥ್ ಸಿಂಗ್‌ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

‘ನನ್ನ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆ ರದ್ದುಪಡಿಸಬೇಕು‘ ಎಂದು ಕೋರಿ ಲೋಕನಾಥ್‌ ಸಿಂಗ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಬುಧವಾರ ಸಂಜೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರನ್ನು ಜಾಮೀನು ಮೇಲೆ ಬಿಡುಗಡೆ ಮಾಡಬೇಕು. ಭದ್ರತಾ ಖಾತರಿಯಾಗಿ ₹ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ಪಡೆಯಬೇಕು’ ಎಂದು ಪ್ರಕರಣದ ತನಿಖಾಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

ಪ್ರತಿವಾದಿಯಾದ ಬ್ಯಾಟರಾಯನಪುರ ಠಾಣಾ ಪೊಲೀಸರು ಮತ್ತು ದೂರುದಾರರಾದ ಬ್ಯಾಟರಾಯನಪುರ ಉಪ ವಲಯದ ಎಸಿಪಿ ಭರತ್‌ ಎಸ್‌.ರೆಡ್ಡಿ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಹೈಕೋರ್ಟ್ ವಕೀಲ ಎಸ್.ಸುನಿಲ್‌ ಕುಮಾರ್‌ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?: ‘ಉದ್ಯಮಿ ಹರೀಶ್ ಅವರಿಗೆ ಸೇರಿದ್ದ ₹ 75 ಲಕ್ಷ ಮೊತ್ತವನ್ನು 2022ರ ಸೆಪ್ಟೆಂಬರ್‌ನಲ್ಲಿ ಅವರ ಕಾರು ಚಾಲಕ ಸಂತೋಷ್ ಕದ್ದೊಯ್ದಿದ್ದ. ಈ ವಿಚಾರ ಮಧ್ಯವರ್ತಿ ಲೋಕನಾಥ್ ಸಿಂಗ್‌ಗೆ ಗೊತ್ತಾಗಿತ್ತು. ಅವರೇ ಹರೀಶ್ ಅವರನ್ನು ಬ್ಯಾಟರಾಯನಪುರ ಠಾಣಾ ಇನ್ಸ್‌ಪೆಕ್ಟರ್‌ ಶಂಕರ್ ನಾಯಕ್ ಬಳಿ ಕರೆತಂದಿದ್ದರು. ಆರೋಪಿಯನ್ನು ಹುಡುಕಿಕೊಡಲು ಇನ್‌ಸ್ಪೆಕ್ಟರ್ ₹ 20 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ನಂತರ, ಸುಳ್ಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ₹ 75 ಲಕ್ಷ ಜಪ್ತಿ ಮಾಡಿದ್ದರು. ಆದರೆ, ಹಣವನ್ನು ದೂರುದಾರರಿಗೆ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದರು‘ ಎಂಬ ಆರೋಪವನ್ನು ಶಂಕರ್‌ ನಾಯಕ್‌ ಎದುರಿಸುತ್ತಿದ್ದರೆ, ಮಧ್ಯವರ್ತಿ ಲೋಕನಾಥ್ ಸಿಂಗ್ ಎರಡನೇ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.