ADVERTISEMENT

5, 8, 9ನೇ ತರಗತಿ ಬೋರ್ಡ್‌ ಪರೀಕ್ಷೆಗೆ ಹಸಿರು ನಿಶಾನೆ

ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 23:55 IST
Last Updated 7 ಮಾರ್ಚ್ 2024, 23:55 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆಯು ಸರ್ಕಾರ ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯ ಅನುಸಾರ ಇದೇ 11ರಿಂದ (ಸೋಮವಾರ) ನಡೆಯುವುದು ಖಚಿತವಾಗಿದೆ.

ಈ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ, ‘ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಇಲಾಖೆ’ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರು ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ಹಾಗೂ ನ್ಯಾಯಯಮೂರ್ತಿ ಕೆ.ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ತುರ್ತು ವಿಚಾರಣೆ ನಡೆಸಿ ತಡೆ ಆದೇಶ ನೀಡಿತು.

ADVERTISEMENT

ಆದೇಶದಲ್ಲೇನಿದೆ?: ‘ಬೋರ್ಡ್‌ ಪರೀಕ್ಷೆ ನಡೆಸಲು ಸರ್ಕಾರ 2023ರ ನವೆಂಬರ್ 16ರಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ ಕರ್ನಾಟಕ (ರುಪ್ಸಾ) ಪ್ರಶ್ನಿಸುವ ಗೋಜಿಗೆ ಹೋಗಿಲ್ಲ. ಪೂರ್ವ ನಿಗದಿಯಂತೆ 5, 8, 9ನೇ ತರಗತಿಗಳಿಗೆ 2023ರ ಡಿಸೆಂಬರ್ 12ರಂದೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಇದೇ 11ರಿಂದ ಪರೀಕ್ಷೆ ಆರಂಭವಾಗಲಿವೆ. ಈ ದಿಸೆಯಲ್ಲಿ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿವೆ. ರಿಟ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠವು ಯಾವುದೇ ಮಧ್ಯಂತರ ಆದೇಶ ನೀಡಿರಲಿಲ್ಲ. ಹೀಗಾಗಿ, ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡದೇ ಹೋದರೆ ಅನಿಶ್ಚಿತ ಸನ್ನಿವೇಶವನ್ನು ಮುಂದುವರಿಸಿದಂತಾಗುತ್ತದೆ’ ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಪರೀಕ್ಷಾ ಮುನ್ನಾದಿನ ಇಂತಹ ಸನ್ನಿವೇಶ ಸೃಷ್ಟಿಯಾಗುವುದು ವಿದ್ಯಾರ್ಥಿ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸರ್ಕಾರದ ವಾದ ಸೂಕ್ತವಾಗಿಯೇ ಇದೆ. ಹಾಗಾಗಿ, ಈ ಮೇಲ್ಮನವಿ ಕುರಿತಂತೆ ಮುಂದಿನ ಆದೇಶ ಬರುವವರೆಗೆ ಅಥವಾ ವಿಲೇವಾರಿ ಆಗುವತನಕ ತಡೆ ಆದೇಶ ಜಾರಿಯಲ್ಲಿರುತ್ತದೆ’ ಎಂದು ವಿಭಾಗೀಯ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಎಸ್‌ಎಲ್‌ಪಿ: ‌‘ವಿಭಾಗೀಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣವೇನು?: ಬೋರ್ಡ್‌ ಪರೀಕ್ಷೆಯ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಶ್ನಿಸಿ ರುಪ್ಸಾ ಹಾಗೂ ‘ಅನುದಾನರಹಿತ ಮಾನ್ಯತೆ ಹೊಂದಿದ ಶಾಲೆಗಳ ಸಂಘಟನೆ’ (ಅವರ್‌ ಸ್ಕೂಲ್ಸ್‌) ಸಲ್ಲಿಸಿದ್ದ ರಿಟ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ತಡೆ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಪ್ರತಿವಾದಿಗಳಾದ ರುಪ್ಸಾ ಮತ್ತು ಅವರ್‌ ಸ್ಕೂಲ್‌ ಪರ ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ.ಧನಂಜಯ ವಾದ ಮಂಡಿಸಿದರು.

ವಿಕ್ರಮ್‌ ಹುಯಿಲಗೋಳ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌
58 ಮತ್ತು 9ನೇ ತರಗತಿಗಳ ಬೋರ್ಡ್‌ ಪರೀಕ್ಷೆಗಳು ಮಾರ್ಚ್‌ 11ರಿಂದ ಆರಂಭವಾಗಲಿವೆ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ
ಬಿ.ಬಿ.ಕಾವೇರಿ ಆಯುಕ್ತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಸರ್ಕಾರದ ನಿಲುವಿನ ಸಮರ್ಥನೆ

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು ‘ಇದೇ 11ರ ಮಧ್ಯಾಹ್ನ 2.30ಕ್ಕೆ 5 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಗಳು ಆರಂಭವಾಗಲಿವೆ. ಮಕ್ಕಳ ಹಿತದೃಷ್ಟಿಯಿಂದ ಬೋರ್ಡ್‌ ಪರೀಕ್ಷೆ ನಡೆಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು ಅದನ್ನು ಸರಿಪಡಿಸುವುದಕ್ಕಾಗಿ ಬೋರ್ಡ್‌ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಬಲವಾಗಿ ಸಮರ್ಥಿಸಿಕೊಂಡರು. ‘ರಾಜ್ಯದಲ್ಲಿ 5-8ನೇ ತರಗತಿಯ 46 ಸಾವಿರ ಶಾಲೆಗಳಿದ್ದು ಪ್ರತಿ ಬ್ಯಾಚಿನ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಟ್ಟಾರೆ 5 8 ಮತ್ತು 9ನೇ ತರಗತಿಯ 25 ಲಕ್ಷ ವಿದ್ಯಾರ್ಥಿಗಳಿದ್ದಾರೆ. ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತದೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ. ಉಳಿದ 5 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಇದೇ 11ರಂದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ’ ಎಂದು ವಿಕ್ರಮ್ ಹುಯಿಲಗೋಳ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.