ADVERTISEMENT

ಕಾಲಮಿತಿಯಲ್ಲಿ ಕೋರ್ಟ್ ಆದೇಶ ಜಾರಿ: ‍ಪ್ರತ್ಯೇಕ ಕೋಶ ರಚನೆಗೆ ಹೈಕೋರ್ಟ್ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 16:14 IST
Last Updated 5 ಆಗಸ್ಟ್ 2024, 16:14 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಕೋರ್ಟ್‌ ಆದೇಶ ಅಥವಾ ತೀರ್ಪುಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ಅನುಕೂಲವಾಗುವಂತೆ ಪ್ರತಿಯೊಂದು ಇಲಾಖೆಯಲ್ಲೂ ಪ್ರತ್ಯೇಕ ಕೋಶಗಳನ್ನು ರಚಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ.

ಈ ಸಂಬಂಧ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

‘ಸರ್ಕಾರದ ಇಲಾಖೆಗಳಲ್ಲಿ ಕಾನೂನು ಕೋಶಗಳನ್ನು ರಚಿಸಬೇಕು. ಅಂತಹ ಕೋಶಗಳು ಕೋರ್ಟ್‌ ಆದೇಶಗಳನ್ನು ಸ್ವೀಕರಿಸಿ, ನಿರ್ದೇಶಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಇದರಿಂದ ನ್ಯಾಯಾಂಗ ನಿಂದನೆ ಅರ್ಜಿಗಳು ದಾಖಲಾಗುವುದು ತಪ್ಪುತ್ತದೆ. ಆ ಕೋಶಗಳಲ್ಲಿನ ಅಧಿಕಾರಿಗಳು; ಕಾಲಕಾಲಕ್ಕೆ ಕೋರ್ಟ್‌ ನೀಡುವ ನಿರ್ದೇಶಗಳನ್ನು ಪಾಲನೆ ಮಾಡುವ ಕುರಿತು ಮೇಲ್ವಿಚಾರಣೆ ನಡೆಸಬೇಕು’ ಎಂದು ಸೂಚಿಸಿತು.

ಈ ಸಂಬಂಧ ‘ಅಡ್ವೊಕೇಟ್‌ ಜನರಲ್‌ ಜತೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸರ್ಕಾರ ಒಂದು ಯೋಜನೆಯ ರೂಪುರೇಷೆಯನ್ನು ಸಲ್ಲಿಸಲಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

ಕಾರ್ಯ ವೈಖರಿಗೆ ಅತೃಪ್ತಿ: ‘ಕೋರ್ಟ್‌ ಆದೇಶಗಳನ್ನು ಪಾಲನೆ ಮಾಡುವ ಬಗ್ಗೆ ಸರ್ಕಾರದ ಇಲಾಖೆಗಳು, ಪ್ರಾಧಿಕಾರಗಳು ಮತ್ತು ಸಂಸ್ಥೆಗಳಲ್ಲಿ ಒಂದು ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ನ್ಯಾಯಾಲಯಗಳ ಆದೇಶಗಳನ್ನು ಜಾರಿಗೊಳಿಸುವುದು ಸರ್ಕಾರಗಳ ಸಾಂವಿಧಾನಿಕ ಕರ್ತವ್ಯವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಳ್ಳುವಾಗ ಹೇಳಿತ್ತು.

‘ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಿದೆ. ಇಲ್ಲವಾದರೆ ನ್ಯಾಯದಾನದ ಉದ್ದೇಶವೇ ಸಾರ್ಥಕವಾಗುವುದಿಲ್ಲ. ನೆಲದ ಕಾನೂನು ಪಾಲನೆ ಮಾಡಿದಂತಾಗುವುದಿಲ್ಲ. ನ್ಯಾಯಾಲಯಗಳ ಆದೇಶಗಳನ್ನು ಸರ್ಕಾರದ ಇಲಾಖೆಗಳು ಪಾಲನೆ ಮಾಡದೇ ಇರುವ ಸಂದರ್ಭಗಳಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗಳು ಹೆಚ್ಚಾಗಲಿವೆ. ಕೋರ್ಟ್‌ ಆದೇಶಗಳಿಗೆ ಬೆಲೆ ನೀಡದಿದ್ದರೆ ಅದು ಕಕ್ಷಿದಾರರ ಮತ್ತು ಪ್ರಜೆಗಳ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ನ್ಯಾಯಾಂಗದ ಆಡಳಿತದ ಮೇಲೂ ಪರಿಣಾಮ ಬೀರಲಿದೆ’ ಎಂದು ತಿಳಿಸಿತ್ತು.

‘ನ್ಯಾಯಾಲಯಗಳ ಆದೇಶಗಳನ್ನು ಪಾಲನೆ ಮಾಡದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದ ವರ್ತನೆ ಸಹಿಸಲಾಗದು. ಅಂತಹ ತಾತ್ಸಾರ ಮನೋಭಾವವನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕಿದೆ. ನ್ಯಾಯದಾನ ವಿಳಂಬವಾದರೆ ನ್ಯಾಯದಿಂದ ವಂಚಿತವಾದಂತಾಗುತ್ತದೆ. ಅಂತೆಯೇ, ಕೋರ್ಟ್‌ ಆದೇಶ ಜಾರಿ ಮಾಡದಿರುವುದೂ ನ್ಯಾಯದ ನಿರಾಕರಣೆಯಾಗುತ್ತದೆ. ಇಂತಹ ಕ್ರಮಗಳನ್ನು ನ್ಯಾಯಾಂಗ ನಿಂದನೆ ಅರ್ಜಿಯಡಿ ಪರಿಗಣಿಸಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.