ADVERTISEMENT

ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಧ್ಯಂತರ ಆದೇಶ ನೀಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 0:24 IST
Last Updated 24 ಮಾರ್ಚ್ 2023, 0:24 IST
   

ಬೆಂಗಳೂರು: ‘ಸರ್ಕಾರಿ ನೌಕರರಿಗೆ ಸಮಾನವಾದ ವೇತನವನ್ನು ನಮಗೂ ನೀಡಬೇಕು ಮತ್ತು ಸಾರಿಗೆ ನೌಕರರ ವಿರುದ್ಧ ಹೂಡಲಾಗಿರುವ ಅಕ್ರಮ ಕೇಸುಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ರಾಜ್ಯ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಶುಕ್ರವಾರ (ಮಾ.24) ನಡೆಸಲು ನಿರ್ಧರಿಸಿದ್ದ ಮುಷ್ಕರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಮುಷ್ಕರಕ್ಕೆ ತಡೆ ಕೋರಿ ಶಿವಮೊಗ್ಗದ ಹಾರೋಗೊಳಿಗೆ ಗ್ರಾಮದ ಹಿರಿಯ ನಾಗರಿಕ ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ, ಮೂರು ವಾರಗಳ ಕಾಲ ಮುಷ್ಕರ ನಡೆಸದಂತೆ ನಿರ್ದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ನಡೆಸುವ ಕಾನೂನಿನ ಪ್ರಕ್ರಿಯೆಗಳಿಗೆ ಅರ್ಜಿದಾರರ ವಿರೋಧವಿಲ್ಲ. ಆದರೆ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ 24ರಂದು (ಶುಕ್ರವಾರ) ಮುಷ್ಕರ ನಡೆಸಲು ವೇದಿಕೆ ಕೈಗೊಂಡಿರುವ ನಿರ್ಧಾರದಿಂದ ಸಾಕಷ್ಟು ಜನರಿಗೆ ಅನನುಕೂಲ ಉಂಟಾಗಲಿದೆ’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ಪರ ವಕೀಲರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯೊಂದಿಗೆ ಕಾರ್ಮಿಕ ಇಲಾಖೆ ಆಯುಕ್ತರು ಇದೇ 20ರಂದು ಮಧ್ಯಾಹ್ನ 2.30ಕ್ಕೆ ಸಂಧಾನ ಸಭೆ ಏರ್ಪಡಿಸಿದ್ದರು. ಆದರೆ, ಯಾವುದೇ ನಿರ್ದಿಷ್ಟ ನಿರ್ಣಯಕ್ಕೆ ಬರುವಲ್ಲಿ ಸಭೆ ವಿಫಲವಾಯಿತು. ಹಾಗಾಗಿ, ಏಪ್ರಿಲ್‌ ‌ 6ರಂದು ಬೆಳಗ್ಗೆ 11.30ಕ್ಕೆ ಪುನಃ ಸಂಧಾನ ಸಭೆ ನಿಗದಿಪಡಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮುಷ್ಕರ ನಡೆಸುವುದರಿಂದ ಸಾರ್ವಜನಿಕರ ಸಂಚಾರ, ಉದ್ಯೋಗಿಗಳು, ಆಸ್ಪತ್ರೆ, ಔಷಧಾಲಯಗಳ ಸಿಬ್ಬಂದಿ ಮತ್ತು ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಇದನ್ನು ತಪ್ಪಿಸಲು ಮೂರು ವಾರ ಕಾಲ ವೇದಿಕೆ ಮುಷ್ಕರ ನಡೆಸಬಾರದು‘ ಎಂದು ವೇದಿಕೆಗೆ ತಾಕೀತು ಮಾಡಿತು.

‘ಈ ಮಧ್ಯಂತರ ಆದೇಶವು ಏಪ್ರಿಲ್‌ 6ರಂದು ಸಂಧಾನ ಸಭೆ ನಡೆಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಈ ಮಧ್ಯಂತರ ಆದೇಶ ಹೊರಡಿಸಲಾಗುತ್ತಿದೆ. ವೇದಿಕೆ ತನ್ನ ಯಾವುದೇ ಬೇಡಿಕೆಗಳಿದ್ದರೆ ಸಂಧಾನ ಸಭೆಯಲ್ಲಿ ಮಂಡಿಸಬೇಕು’ ಎಂದು ಸೂಚಿಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ-ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಮುಷ್ಕರ ಮುಂದೂಡಿಕೆ

‘ನ್ಯಾಯಾಲಯದ ನಿರ್ದೇಶನದ ಮೇರೆಗ ಮುಷ್ಕರ ಮುಂದೂಡಲಾಗಿದ್ದು, ಪದಾಧಿಕಾರಿಗಳ ಸಭೆ ನಡೆಸಿ ಮುಂದಿನ ದಿನಾಂಕ ಪ್ರಕಟಿಸಲಾಗುವುದು’ ಎಂದು ಸಮಾನ ಮನಸ್ಕರ ವೇದಿಕೆ ತಿಳಿಸಿದೆ.

‘ಮೂರು ವಾರ ಮುಷ್ಕರ ನಡೆಸದಂತೆ ನ್ಯಾಯಾಲಯ ಹೇಳಿದ್ದು, ಈ ಅವಧಿ
ಯಲ್ಲಿ ಕಾನೂನು ಹೋರಾಟ ಮುಂದುವರಿಯಲಿದೆ. ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ. ನೌಕರರ ಬೇಡಿಕೆಗಳಿಗೆ ಸ್ಪಂದಿಸದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.