ಬೆಂಗಳೂರು: ‘ಕಾವೇರಿ ಕೂಗು ಯೋಜನೆ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ’ ಎಂದು ಡಿಸ್ಕವರಿ ವಾಹಿನಿಗೆ ಪತ್ರ ಬರೆದಿರುವುದಕ್ಕೆ ಸಮರ್ಥನೆ ಸಲ್ಲಿಸುವಂತೆ ವಕೀಲ ಎ.ವಿ. ಅಮರನಾಥನ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅಮರನಾಥನ್ ಅವರು, ಡಿಸ್ಕವರಿ ವಾಹಿನಿಗೆ ಇ–ಮೇಲ್ ಕಳುಹಿಸಿ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಿಳಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತು.
‘ಕಾರ್ಯಕ್ರಮ ಪ್ರಸಾರ ಮಾಡದಂತೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿಲ್ಲ. ಆದರೂ, ಅಮರನಾಥನ್ ಅವರು ಆ.21ರಂದು ಇ–ಮೇಲ್ ಕಳುಹಿಸಿದ್ದರು. ಇದರಿಂದಾಗಿ, ಕಾವೇರಿ ಕೂಗು ಯೋಜನೆ ಬಗ್ಗೆ ಆ.22ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಡಿಸ್ಕವರಿ ವಾಹಿನಿ ರದ್ದುಪಡಿಸಿತು’ ಎಂದು ಈಶ ಔಟ್‌ರಿಚ್ ಪರ ವಕೀಲರು ವಾದಿಸಿದರು.
‘ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಟಿ.ವಿ ವಾಹಿನಿಗೆ ಅಮರನಾಥನ್ ಯಾವ ಆಧಾರದಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಅವರು ವಿವರಣೆ ನೀಡಬೇಕಾಗುತ್ತದೆ’ ಎಂದು ಪೀಠ ಹೇಳಿತು. ಅನಾರೋಗ್ಯ ಕಾರಣದಿಂದ ಅಮರನಾಥನ್ ವಿಚಾರಣೆ ವೇಳೆ ಹಾಜರಿರಲಿಲ್ಲ. ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.