ADVERTISEMENT

BBMP ಕ್ರಮ ಪ್ರಶ್ನಿಸಿ ಸಚಿವ ಗುಂಡೂರಾವ್‌ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 14:52 IST
Last Updated 17 ಸೆಪ್ಟೆಂಬರ್ 2024, 14:52 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ಸಚಿವ ದಿನೇಶ್‌ ಗುಂಡೂರಾವ್‌ ಒಡೆತನದ ಸ್ಥಿರಾಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರು ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ₹41 ಲಕ್ಷಕ್ಕೂ ಹೆಚ್ಚು ಮೊತ್ತದ ತೆರಿಗೆ ಮತ್ತು ಶುಲ್ಕ ಪಾವತಿಸುವಂತೆ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್‌ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬಸ್ಸುಮ್ ದಿನೇಶ್‌ ರಾವ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ಪ್ರಕರಣದ ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಬಿಬಿಎಂಪಿ ಪೂರ್ವ ವಿಭಾಗದ ನಗರ ಯೋಜನಾ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?: ‘ಆರ್.ಟಿ. ನಗರದ ಮಠದಹಳ್ಳಿಯಲ್ಲಿ ನಮ್ಮ ಒಡೆತನದಲ್ಲಿ 608.21 ಚದರ ಅಡಿ ಆಸ್ತಿ ಇದೆ. ಇದಕ್ಕೆ ಬಿಬಿಎಂಪಿ ಖಾತೆಯನ್ನೂ ನೀಡಿದೆ. ಈ ಆಸ್ತಿಗೆ ಚಾಲ್ತಿ ತೆರಿಗೆ ಕಟ್ಟಲಾಗಿದೆ. ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿ ಮನವಿ ಸಲ್ಲಿಸಿದ್ದೆವು. ಆದರೆ, ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ ಶುಲ್ಕ, ಅದರ ಮೇಲೆ ಶೇ 18ರಷ್ಟು ಜಿಎಸ್‌ಟಿ, ಭದ್ರತಾ ಠೇವಣಿ, ಕಟ್ಟಡ ಹಾಗೂ ನಿವೇಶನ ಅಭಿವೃದ್ಧಿ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ, ವರ್ತುಲ ರಸ್ತೆ ಶುಲ್ಕ, ಕೊಳೆಗೇರಿ ಅಭಿವೃದ್ಧಿ ಸೆಸ್ ಸೇರಿದಂತೆ ವಿವಿಧ ಬಗೆಯ ₹ 41.55 ಲಕ್ಷ ಮೊತ್ತದ ಶುಲ್ಕ, ತೆರಿಗೆ, ಸೆಸ್‌ಗಳು ಹಾಗೂ ₹ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಬಿಬಿಎಂಪಿ 2024ರ ಆಗಸ್ಟ್ 29ರಂದು ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದೆ. ಇದು ಕಾನೂನು ಬಾಹಿರ’ ಎಂದು ಅರ್ಜಿದಾರರು ದೂರಿದ್ದಾರೆ.

ಮನವಿ: ‘ಕರ್ನಾಟಕ ಪೌರ ನಿಗಮಗಳು ಹಾಗೂ ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ಕಾಯ್ದೆ-2021 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಕರ್ನಾಟಕ ಪಟ್ಟಣ ಹಾಗೂ ನಗರ ಯೋಜನಾ ಕಾಯ್ದೆ–2004ರ ಕಲಂ 18-ಎ ರದ್ದುಪಡಿಸಬೇಕು. ಬಿಬಿಎಂಪಿ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು. ನಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವುದೇ ಷರತ್ತು ಹಾಗೂ ತೆರಿಗೆ, ಶುಲ್ಕಗಳನ್ನು ವಿಧಿಸದೆ ನಕ್ಷೆ ಮಂಜೂರು ಮಾಡಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.