ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸವೆಂಬ ಅಸ್ತ್ರವು ಅಧಿಕಾರದ ಕೂಗುಮಾರಿಗಳಿಂದ ಅಪಾಯಕ್ಕೆ ಸಿಲುಕಿದೆ’ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ‘ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆ, ಮರಣ ಮತ್ತು ಅನರ್ಹತೆಯಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 15 ತಿಂಗಳ ಅವಧಿ ಪೂರ್ಣವಾಗಿರಬೇಕು’ ಎಂದು ಸ್ಪಷ್ಟಪಡಿಸಿದೆ.
‘ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದವರ ಅವಿಶ್ವಾಸ ನಿರ್ಣಯ ಮಂಡಿಸಲು 15 ತಿಂಗಳ ಅವಧಿ ಪೂರ್ಣವಾಗಲೇಬೇಕಾದ ಅವಶ್ಯ ಇಲ್ಲ’ ಎಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಯಲಹಂಕ ತಾಲ್ಲೂಕಿನ ಬಾಗಲೂರು ಗ್ರಾ.ಪಂ ಅಧ್ಯಕ್ಷರಾಗಿದ್ದ ಪ್ರೀತಿ ಮುನೇಗೌಡ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದ್ದು, ‘ಅನೈತಿಕ ರಾಜಕೀಯ ಹಿತಾಸಕ್ತಿ ಈಡೇರಿಸುವುದು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅತೃಪ್ತ ಗುಂಪುಗಳಿಂದ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆ ಮಾಡಲಾಗುವ ಪ್ರವೃತ್ತಿ ನಿಯಂತ್ರಿಸುವುದು ಪಂಚಾಯತ್ ರಾಜ್ ಕಾಯ್ದೆಯ ಕಲಂ 49(2)ರ ಮೂಲ ಉದ್ದೇಶವಾಗಿದೆ’ ಎಂದು ಉಲ್ಲೇಖಿಸಿದೆ.
‘ಅಧ್ಯಕ್ಷರ ಚುನಾವಣೆ ದಿನಾಂಕದಿಂದ ಮೊದಲ 15 ತಿಂಗಳವರೆಗೂ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ನಿರ್ಬಂಧ ಇರಲಿದೆ. ಈ ಪ್ರಕರಣದಲ್ಲಿ 2023ರ ಮಾರ್ಚ್ 7ರಂದು ಅಧಿಕಾರ ವಹಿಸಿಕೊಳ್ಳಲಾಗಿದ್ದು, ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ–2021ರ ಕಲಂ 49ರ ಅಡಿಯಲ್ಲಿ ತಿಳಿಸಿರುವಂತೆ ಅಧಿಕಾರ ವಹಿಸಿಕೊಂಡ 15 ತಿಂಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ’ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.