ADVERTISEMENT

ಜೈಲು ಕಂಬಿಗಳ ಹಿಂದೊಂದು ಪ್ರೇಮ್‌ ಕಹಾನಿ: ಕೈದಿ ಬಿಡುಗಡೆಗೆ ಆದೇಶ

ಬಿ.ಎಸ್.ಷಣ್ಮುಖಪ್ಪ
Published 1 ಏಪ್ರಿಲ್ 2023, 19:31 IST
Last Updated 1 ಏಪ್ರಿಲ್ 2023, 19:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ’ಪ್ರತಿಯೊಂದು ಜೈಲುಗಳ ಗೋಡೆಗಳನ್ನೂ ಅವಮಾನದ ಇಟ್ಟಿಗೆಗಳಿಂದ ಪೇರಿಸಲಾಗಿದೆ...!’ ಎಂಬ ಪ್ರಖ್ಯಾತ ಐರಿಷ್‌ ಕವಿ ಆಸ್ಕರ್‌ ವೈಲ್ಡ್‌ನ ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ಪ್ರೇಮ ಕಹಾನಿಯ ಆರ್ತನಾದಕ್ಕೆ ಮನಮಿಡಿದಿರುವ ಹೈಕೋರ್ಟ್‌; ಕೊಲೆ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರ ಮದುವೆಗೆ 15 ದಿನಗಳ ಪೆರೋಲ್‌ ನೀಡುವಂತೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.

‘ಕೈದಿ ಆನಂದನನ್ನು ನಾನು ಕಳೆದ ಒಂಬತ್ತು ವರ್ಷಗಳಿಂದ ಮನದುಂಬಿ ಪ್ರೀತಿಸುತ್ತಿದ್ದೇನೆ. ಈಗ ಅವನನ್ನೇ ಮದುವೆಯಾಗಬೇಕು. ಆದ್ದರಿಂದ, ಇದಕ್ಕಾಗಿ ಅವಕಾಶ ಮಾಡಿಕೊಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋಲಾರ ಜಿಲ್ಲೆಯ ದಿಣ್ಣೆ ಕೊತ್ತೂರಿನ ಜಿ.ನೀತಾ (30) ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ನನ್ನ ಪ್ರೀತಿಯ ಜೀವವಾದ ಕೈದಿ ಆನಂದನನ್ನು ಒಂದು ವೇಳೆ ಪೆರೋಲ್‌ ಮೇಲೆ ಬಿಡುಗಡೆ ಮಾಡದೇ ಹೋದಲ್ಲಿ ಒಂಬತ್ತು ವಸಂತಗಳ ನನ್ನ ನಿರ್ವ್ಯಾಜ ಪ್ರೇಮ ನಿಷ್ಫಲಗೊಳ್ಳುತ್ತದೆ. ಆಗ ಎರಗಬಹುದಾದ ವಿರಹದ ಸಂಕಟವನ್ನು ಹೇಗೆ ತಾನೇ ಅನುಭವಿಸಲಿ ಎಂಬ ಅರ್ಜಿದಾರರ ತಹತಹಿಕೆ ನ್ಯಾಯಯುತವಾಗಿಯೇ ಇದೆ. ತಮ್ಮ ಬೇಗುದಿಯನ್ನೆಲ್ಲಾ ಅವರು ಕೋರ್ಟ್‌ಗೆ ಮುಚ್ಚುಮರೆಯಿಲ್ಲದೆ ಬಿಚ್ಚುಮನಸ್ಸಿನಿಂದ ಪ್ರಸ್ತುತಪಡಿಸಿದ್ದಾರೆ. ಹೀಗಾಗಿ, ಈ ಅರ್ಜಿಯನ್ನು ತೆರೆದ ಹೃದಯದ ಶುದ್ಧಪ್ರೇಮ ಮತ್ತು ಮಾನವೀಯ ಅಂತಃಕರಣದ ನೆಲೆಯಲ್ಲಿ ಮನ್ನಿಸಲಾಗುತ್ತಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಅರ್ಜಿದಾರರ ಬೇಡುವಿಕೆಯನ್ನು ಪುಷ್ಟೀಕರಿಸಬಹುದಾದ ಬಾಂಬೆ ಹೈಕೋರ್ಟ್‌, ರಾಜಸ್ಥಾನ ಹೈಕೋರ್ಟ್‌ ಮತ್ತು ರಾಜ್ಯ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠಗಳ ಹಲವು ಪೂರ್ವನಿದರ್ಶನಗಳನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಎದೆಗಿಳಿಯುವ ಪದಗುಚ್ಛಗಳ ಕಾವ್ಯಾತ್ಮಕ ಶೈಲಿಯ ಮೂಲಕ ಹದಿನಾಲ್ಕು ಪುಟಗಳಲ್ಲಿ ಕ್ಲುಪ್ತ ತೀರ್ಪನ್ನು ಪ್ರಕಟಿಸಿದ್ದಾರೆ.

‘ಪ್ರತಿಯೊಬ್ಬ ಸಂತನ ಜೀವನದಲ್ಲಿ ಒಂದು ಭೂತಕಾಲವಿದೆ ಹಾಗೂ ಎಲ್ಲ ಪಾಪಿಗಳಿಗೂ ಅವರದ್ದೇ ಆದ ಭವಿಷ್ಯ ಎಂಬುದೊಂದು ಇರುತ್ತದೆ. ಒಬ್ಬ ಅಪರಾಧಿ ತನ್ನ ತಪ್ಪನ್ನು ಶುದ್ಧೀಕರಿಸಿಕೊಳ್ಳಲಿ ಎಂದೇ ಅವನನ್ನು ಜೈಲಿನಲ್ಲಿ ಕೈದಿಯಾಗಿ ಇರುವಂತೆ ಶಿಕ್ಷೆ ವಿಧಿಸಲಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅವನೆಡೆಗಿನ ಮನುಷ್ಯತ್ವದ ಧೋರಣೆಯನ್ನು ಯಾವುದೇ ಕಲ್ಯಾಣ ರಾಜ್ಯದ ಸಮಾಜ ಕಡೆಗಣಿಸುವಂತಾಗಬಾರದು...’ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.

‘ಅಪರಾಧಿಗೆ ಆನಂದನಿಗೆ (ಕೈದಿ ಸಂಖ್ಯೆ 11699) ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಇದೇ 5ರ ಮಧ್ಯಾಹ್ನದ ಒಳಗಾಗಿ 15 ದಿನಗಳ ಅವಧಿಗೆ ಬಿಡುಗಡೆ ಮಾಡಬೇಕು‘ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಂದಿಖಾನೆ ಡಿಐಜಿ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ ಅವರಿಗೆ ಆದೇಶಿಸಲಾಗಿದೆ. ಅರ್ಜಿದಾರರಾದ ನೀತಾ ಮತ್ತು ಆನಂದನ ತಾಯಿ ರತ್ನಮ್ಮ ಅವರ ಪರವಾಗಿ ವಕೀಲ ಕೆ. ರಾಘವೇಂದ್ರ ಗೌಡ ಹಾಗೂ ರಾಜ್ಯ ಪ್ರಾಸಿಕ್ಯೂಷನ್‌ ಪರವಾಗಿ ಎಂ.ವಿನೋದ್ ಕುಮಾರ್ ವಾದ ಮಂಡಿಸಿದ್ದರು.

ಪ್ರಕರಣವೇನು?: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ 2015ರ ಆಗಸ್ಟ್‌ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ (ಘಟನೆ ನಡೆದಾಗ 21 ವರ್ಷ) ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆಗಸ್ಟ್‌ 17ರಂದು ಬಂಧಿಸಿದ್ದರು. ನಂತರ ಸೆಷನ್ಸ್‌ ನ್ಯಾಯಾಲಯ 2019ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.