ಬೆಂಗಳೂರು: ರಾಮನಗರ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಶೌಚಗುಂಡಿಯಲ್ಲಿ ಉಸಿರುಗಟ್ಟಿ ಮೃತಪಟ್ಟ ಪ್ರಕರಣದ ವಿಚಾರಣೆ ವೇಳೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಕ್ಟೋಬರ್ 4 ರಂದು ಖುದ್ದು ಹಾಜರಿರುವಂತೆ ಹೈಕೋರ್ಟ್ ಆದೇಶಿಸಿದೆ.
2021ರ ಜನವರಿಯಲ್ಲಿ ಕಲಬುರ್ಗಿ ಮತ್ತು ಜೂನ್‌ನಲ್ಲಿ ರಾಮನಗರದಲ್ಲಿ ಶೌಚಗುಂಡಿಯಲ್ಲಿ ಪೌರ ಕಾರ್ಮಿಕರು ಬಿದ್ದು ಮೃತಪಟ್ಟಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಮಲಹೊರುವ ಪದ್ಧತಿ ನಿಷೇಧ ಮತ್ತು ಪುನವರ್ಸತಿ ಕಾಯ್ದೆ 2013ರ ಸೆಕ್ಷನ್ 13ರ ನಿಬಂಧನೆಗಳನ್ನು ಪಾಲನೆ ಮಾಡಿರುವ ಬಗ್ಗೆ ವಿವರ ಸಲ್ಲಿಸುವಂತೆ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.
ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಪಾವತಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತು. ‘ಸೆಕ್ಷನ್ 13ರ ಅಡಿಯಲ್ಲಿ ಸೂಚಿಸಿರುವಂತೆ ಪುನರ್ವಸತಿ ಯೋಜನೆಯಡಿ ಮೃತರ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ನೆರವು, ಜೀವನೋಪಾಯಕ್ಕೆ ಕೌಶಲ ತರಬೇತಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕಾಗುತ್ತದೆ. ₹10 ಲಕ್ಷ ಪರಿಹಾರ ನೀಡಿರುವುದನ್ನು ಬಿಟ್ಟರೆ ಸರ್ಕಾರ ಬೇರೆ ಏನನ್ನೂ ಮಾಡಿದಂತೆ ಕಾಣಿಸುತ್ತಿಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದರು.
‘ಪುನರ್ವಸತಿ ಸೌಕರ್ಯ ಕಲ್ಪಿಸುವುದು ಆಯಾ ಜಿಲ್ಲಾಧಿಕಾರಿಗಳ ಹೊಣೆ. ಮುಂದಿನ ವಿಚಾರಣೆ ವೇಳೆ ಅವರು ಹಾಜರಾಗಬೇಕು. ಒಂದು ವೇಳೆ ಅನುಸರಣಾ ಪತ್ರ ಸಲ್ಲಿಸಿದರೆ ಅವರ ಉಪಸ್ಥಿತಿಗೆ ವಿನಾಯಿತಿ ನೀಡಲಾಗುವುದು’ ಎಂದು ಪೀಠ ಹೇಳಿತು.
‘ಈ ಕಾಯ್ದೆಯ ಅನುಷ್ಠಾನ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯೂ ಜಿಲ್ಲಾಧಿಕಾರಿಗಳದ್ದೇ ಆಗಿದೆ. ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ಒದಗಿಸಿರುವ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ವಿವರ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದೂ ಪೀಠ ಎಚ್ಚರಿಕೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.