ADVERTISEMENT

ಹಣ ಪಾವತಿ ತಪ್ಪಿಸಿಕೊಳ್ಳಲು ಆಯೋಗ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 0:30 IST
Last Updated 11 ಫೆಬ್ರುವರಿ 2024, 0:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: 'ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗ ರಚಿಸಿದೆ ಎಂಬ ಗುತ್ತಿಗೆದಾರರ ಪರ ಹಿರಿಯ ವಕೀಲರ ಆಪಾದನೆ ಮೇಲ್ನೋಟಕ್ಕೆ ಸರಿ ಇದ್ದಂತೆ ಕಾಣುತ್ತಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಏಕವ್ಯಕ್ತಿ ಆಯೋಗ ರಚನೆ ಪ್ರಶ್ನಿಸಿ ಮೆಸರ್ಸ್‌ ನಿಕ್ಷೇಪ ಇನ್ಫ್ರಾ  ಪ್ರಾಜೆಕ್ಟ್ಸ್‌ ಪಾಲುದಾರ ಬಿ.ಎಸ್‌.ಧನಂಜಯ ಸೇರಿದಂತೆ ಒಟ್ಟು 44 ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರು ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಇಂಗಿತವನ್ನು ಹೊರಹಾಕಿದೆ. 

‘ಹೈಕೋರ್ಟ್‌ ಆದೇಶ ಹೊರಡಿಸಿ 45 ದಿನಗಳಾದರೂ ಆಯೋಗಕ್ಕೆ ಸಂಬಂಧಿಸಿದವರು ಯಾಕೆ ಒಂದೇ ಒಂದು ಹಾಳೆಯ ದಾಖಲೆಯನ್ನೂ ಸಲ್ಲಿಸಿಲ್ಲ’ ಎಂದು ಕಿಡಿ ಕಾರಿರುವ ನ್ಯಾಯಪೀಠ, ‘ಇದಕ್ಕೆ ರಾಜ್ಯ ಸರ್ಕಾರ ಸೂಕ್ತ ಉತ್ತರ ನೀಡಬೇಕು. ಇಲ್ಲವಾದಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ಎಚ್ಚರಿಸಿದ್ದು, ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದೆ.

ADVERTISEMENT

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಶೇ 40ರಷ್ಟು ಕಮಿಷನ್ ಆರೋಪಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ 2023ರ ಆಗಸ್ಟ್‌ 5ರಂದು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಏಕವ್ಯಕ್ತಿ ಆಯೋಗ ರಚಿಸಿ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.