ಬೆಂಗಳೂರು: ‘ಅಪಘಾತ ನಡೆದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗಿಲ್ಲ ಎಂದಾದರೆ ನಷ್ಟಕ್ಕೆ ಒಳಗಾದವರಿಗೆ ಮಾಲೀಕರೇ ಪರಿಹಾರ ನೀಡಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
‘ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ವಾಹನದ ಮಾಲೀಕರೇ ಪರಿಹಾರ ನೀಡಬೇಕು’ ಎಂಬ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಈ ಆದೇಶ ನೀಡಿದೆ.
‘ಅಪಘಾತ ನಡೆಯುವ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಅದು ಘಟನೆ ನಡೆದ ಮರುದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡಿ ಎಂದು ಸೂಚಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
‘ಈ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ 5 ತಾಸು ಮುನ್ನವೇ ವಾಹನದ ವಿಮೆ ನವೀಕರಣ ಮಾಡಿಸಲಾಗಿದ್ದರೂ, ಘಟನೆ ನಡೆದ ಮರುದಿನದಿಂದ ಅದು ಅನ್ವಯವಾಗಲಿದೆ. ಹೀಗಾಗಿ, ಘಟನೆಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಲು ಆಗುವುದಿಲ್ಲ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ವಿಚಾರಣಾ ನ್ಯಾಯಾಲಯ ಆದೇಶಿಸಿದ್ದ ಪರಿಹಾರದ ಮೊತ್ತ ₹ 15.47 ಲಕ್ಷವನ್ನು ₹ 13.30 ಲಕ್ಷಕ್ಕೆ ಇಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.