ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ 2008ರಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಡಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ 81 ವರ್ಷದ ವೃದ್ಧ ಅಪರಾಧಿಯೊಬ್ಬರ ಮೇಲೆ ಕರುಣೆ ತೋರಿರುವ ಹೈಕೋರ್ಟ್ ಶಿಕ್ಷೆಯನ್ನು ಮಾರ್ಪಾಡು ಮಾಡಿ ಮೂರು ದಿನಗಳಿಗೆ ಇಳಿಸಿದ್ದು, ಒಂದು ವರ್ಷ ಸ್ಥಳೀಯ ಅಂಗನವಾಡಿಯಲ್ಲಿ ಸಂಬಳರಹಿತ ಸೇವೆ ಸಲ್ಲಿಸುವಂತೆ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಬಂಟ್ವಾಳದ ಕರೋಪಾಡಿಯ ಐತಪ್ಪ ನಾಯ್ಕ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ದಿನೇಶ್ ಕುಮಾರ್ ಕೆ.ರಾವ್ ಅವರು, ‘ಈ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದಂತೆ ಈಗಾಗಲೇ ಮೂರು ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅವರಿಗೆ 81 ವರ್ಷವಾಗಿದೆ. ಮಕ್ಕಳೂ ಇಲ್ಲ. ವಯಸ್ಸಾಗಿರುವ ಪತ್ನಿಯ ಆರೈಕೆಯನ್ನೂ ಅವರು ಮಾಡಬೇಕಿದೆ. ಹೀಗಾಗಿ, ಮನವಿ ಪರಿಗಣಿಸಿ ಶಿಕ್ಷೆ ಮಾರ್ಪಾಡು ಮಾಡಬೇಕು’ ಎಂದು ಕೋರಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜೆಎಂಎಫ್ ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯವು 2012ರ ಜುಲೈ 7ರಂದು ನೀಡಿದ್ದ ಶಿಕ್ಷೆಯನ್ನು ಮಾರ್ಪಾಡು ಮಾಡಿದೆ.
ಅರ್ಜಿದಾರರು ಈಗಾಗಲೇ ಮೂರು ದಿನಗಳ ಜೈಲು ಶಿಕ್ಷೆ ಅನುಭವಿಸಿರುವ ಕಾರಣ 2024ರ ಫೆಬ್ರುವರಿ 20ರವರೆಗೆ ಮಿತನಡ್ಕ ಅಂಗನವಾಡಿಯಲ್ಲಿ ಸಮುದಾಯ ಸೇವೆ ಸಲ್ಲಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.